ಮಂಡ್ಯದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ಈಗಾಗಲೇ 12,92,681 ಮತದಾರರ ಮ್ಯಾಪಿಂಗ್
- ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಆಯೋಜನೆ
ಮಂಡ್ಯ: ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್ ಮಾಡುವಂತೆ ಭಾರತೀಯ ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ವಿಶೇಷ ಪರಿಷ್ಕರಣೆ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ನೈಜತೆಯನ್ನು ಕಾಪಾಡಲು ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ಮ್ಯಾಪಿಂಗ್ ಮತ್ತು ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೂತ್‌ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಿ ಮ್ಯಾಪಿಂಗ್ ಪ್ರಕ್ರಿಯೆ ಮಾಡಬೇಕು. ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಬೀದಿ ಮತ್ತು ಮನೆವಾರು ಮ್ಯಾಪಿಂಗ್ ಪ್ರಕ್ರಿಯೆ ನಡೆಯಬೇಕು. ಜಿಲ್ಲೆಯಲ್ಲಿ ಒಟ್ಟು 15,83,368 ಮತದಾರರು ಇದ್ದಾರೆ. ಈ ಪೈಕಿ ಈಗಾಗಲೇ 12,92,681 ಮತದಾರರ ಮ್ಯಾಪಿಂಗ್ ಆಗಿದ್ದು, 2,90,687 ಮತದಾರರ ಮ್ಯಾಪಿಂಗ್ ಆಗಬೇಕಾಗಿದೆ. ಒಟ್ಟಾರೆ ಈವರೆಗೆ ಶೇ.81.64ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಹಾಗೂ ಎಲ್ಲ ತಾಲೂಕಿನ ತಹಸೀಲ್ದಾರ್ ಇದ್ದರು.