ಮಂಡ್ಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿ ಎ.ಎಸ್.ಮಧುಚಂದ್ರ ಮತ್ತು ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಲ್.ಲೋಕೇಶ್(ಲಕ್ಕಪ್ಪ) ಅವರನ್ನು ರೋಟರಿ ಮಾಂಡವ್ಯದಿಂದ ಅಭಿನಂದಿಸಲಾಯಿತು. 
ಮಂಡ್ಯ

ನಗರದಲ್ಲಿ 32 ಯೂನಿಟ್ ರಕ್ತಸಂಗ್ರಹ: ರೋಟರಿ ಮಾಂಡವ್ಯದಿಂದ ಶಿಬಿರ ಆಯೋಜನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಗೆ ಗಿಡಗಳ ವಿತರಣೆ
  • ಮಿಮ್ಸ್ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ
ಮಂಡ್ಯ: ನಗರದ ಗಾಂಧಿಭವನದಲ್ಲಿ ರೋಟರಿ ಮಾಂಡವ್ಯದಿಂದ ಆಯೋಜಿಸಿದ್ದ ಶಿಬಿರದಲ್ಲಿ 32 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ವಿಶ್ವ ರಕ್ತದಾನಿಗಳ ದಿನದ ಅಂಗವಾಗ ನಡೆದ ಶಿಬಿರದಲ್ಲಿ ರೋಟರಿ ಮಾಂಡವ್ಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದರು. ಅಂತೆಯೇ ಸಂಗ್ರಹಿಸಿದ ರಕ್ತವನ್ನು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಪಶು ವೈದ್ಯ ಡಾ.ಜಯರಾಂ, ರಕ್ತದಾನಿ ಎ.ಎಸ್.ಮಧುಚಂದ್ರ ಮತ್ತು ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಚ್.ಎಲ್.ಲೋಕೇಶ್(ಲಕ್ಕಪ್ಪ) ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ 150ಕ್ಕೂ ಹೆಚ್ಚು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಆಶಾಲತಾ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಮನುಷ್ಯ ಬದುಕಿದ್ದಾಗ ಮಾಡುವ ದಾನದ ಪೈಕಿ ರಕ್ತದಾನ ಮಹತ್ವದ ಕೊಡುಗೆಯಾಗಿದೆ. ಪ್ರತಿ ಪುರುಷ ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನ ಮಾಡಬಹುದು. ಅಂತೆಯೇ ಮಹಿಳೆಯರು ಮೂರು ಬಾರಿ ರಕ್ತ ಕೊಡಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಮಾತನಾಡಿ, ಇತ್ತೀಚಿನ ದಿನದಲ್ಲಿ ಅಪಘಾತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಲು ರಕ್ತದ ಅವಶ್ಯಕತೆ ಇದೆ. ಆದರೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ. ಕೆಲವರಲ್ಲಿ ಮೂಢನಂಬಿಕೆಯೂ ಇದೆ. ಇಂತಹ ಮನಸ್ಥಿತಿಯಿಂದ ಹೊರಬಂದು ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಲಿ ಎಂದು ಹಾರೈಸಿದರು.
ರೋಟರಿ ಮಾಂಡವ್ಯ ಅಧ್ಯಕ್ಷ ಡಿ.ಸಿ.ಅಶೋಕ ಮಾತನಾಡಿ, ರಕ್ತದಾನ ಮಾಡುವುದು ಉತ್ತಮ ಸೇವೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಂಡ್ಯದಲ್ಲಿ ರಕ್ತದಾನ ಶಿಬಿರ ಹೆಚ್ಚೆಚ್ಚು ಆಯೋಜನೆಗೊಳ್ಳುತ್ತಿರುತ್ತವೆ. ಇದು ಜಿಲ್ಲೆಯ ಜನರ ಮಾನವೀಯ ಗುಣಕ್ಕೆ ಸಾಕ್ಷಿಯಾಗಿದೆ. ಇನ್ನು ಹಲವು ದಶಕದಿಂದ ರೋಟರಿ ವತಿಯಿಂದ ಸಾಮಾಜಿಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ. ನೊಂದವರು ಹಾಗೂ ಅವಶ್ಯಕತೆ ಇರುವವರಿಗೆ ನೆರವು ನೀಡಲಾಗುತ್ತಿದೆ. ನಾನು ವಿದ್ಯಾರ್ಥಿದಿಸೆಯಿಂದಲೂ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಮುಂದಿನ ದಿನದಲ್ಲಿ ಇನ್ನಷ್ಟು ಸಾಮಾಜಿಕ ಚಟುವಟಿಕೆ ಆಯೋಜಿಸಲಾಗುವುದು ಎಂದು ಹೇಳಿದರು.
ರೋಟರಿ ಮದ್ದೂರು ಅಧ್ಯಕ್ಷ ಶ್ರೀನಿವಾಸ್, ಸಮೃದ್ಧಿ ರೋಟರಿ ಅಧ್ಯಕ್ಷ ರವಿಕುಮಾರ್, ಮಿಮ್ಸ್ ರಕ್ತನಿಧಿ ಕೇಂದ್ರದ ರಫಿ, ರೋಟರಿ ಮಾಂಡವ್ಯ ಕಾರ್ಯದರ್ಶಿ ಎಚ್.ಆರ್.ಆದರ್ಶ್, ಉಪಾಧ್ಯಕ್ಷ ಅಭಿಲಾಷ್, ನಿರ್ದೇಶಕರಾದ ಚಾಮರಾಜು, ರಾಮಲಿಂಗು, ಉಮಾಕಾಂತ್, ಯೋಗೇಶ್, ಕೆನರಾಬ್ಯಾಂಕ್ ನಾಗೇಶ್, ಶಿವರಾಂ, ಸಾಗರ್‌ಸಿಂಹ, ಅಭಿಷೇಕ್ ಇತರರಿದ್ದರು.