ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಎಂ.ಬಿ.ಇಂದ್ರಕುಮಾರ್ ಮಾತನಾಡಿದರು.
- ಚುಂಚಶ್ರೀ ವಿರುದ್ಧ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ
- ಹಲವು ಬಾರಿ ವಿವಾದ ಸೃಷ್ಟಿಸಿ ಕ್ಷಮೆ ಕೋರಿದ್ದಾರೆಂದ ಮುಖಂಡರು
ಮಂಡ್ಯ: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಶ್ರೀಮಠಕ್ಕೆ ತೆರಳಿ ಸ್ವಾಮೀಜಿ ಬಳಿ ಕ್ಷಮೆಯಾಚಿಸಬೇಕು ಎಂದು ಒಕ್ಕಲಿಗರ ಸಂಘದ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಎಂ.ಬಿ.ಇಂದ್ರಕುಮಾರ್ ಆಗ್ರಹಿಸಿದರು.
ರಮೇಶ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ವಿವಾದದ ಹೇಳಿಕೆ ನೀಡುತ್ತಿರುವುದು ಇದೇ ಮೊದಲೆನಲ್ಲ. ಹಿಂದೆ ಫುಲ್ವಾಮ ದಾಳಿ, ಮತದಾರರ ಪಟ್ಟಿ ಪರಿಷ್ಕರಣೆ, ನೋಟ್ ಅಮಾನ್ಯತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗೊಂದಲ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ್ದಾರೆ. ಇದು ಎಷ್ಟು ಸರಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಇದೀಗ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಚುಂಚಶ್ರೀ ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಮಂಡ್ಯ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳಿದ್ದಾರೆ. ಅವರು ಒಕ್ಕಲಿಗ ಸಮುದಾಯ ಹಾಗೂ ಮಠದ ಭಕ್ತರ ಭಾವನೆಗೆ ಗೌರವ ನೀಡಬೇಕು. ಅದರಂತೆ ಮಠಕ್ಕೆ ತೆರಳಿ ಚುಂಚಶ್ರೀಗಳ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಸಂಘದ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಹರೀಶ್, ಕಾರ್ಯದರ್ಶಿ ಸತೀಶ್ ಇದ್ದರು.