ಮಂಡ್ಯ ನಗರದಲ್ಲಿ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು.
- ನಗರದಲ್ಲಿ ಜಯಂತ್ಯುತ್ಸವ ಆಚರಣೆ
- ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಣೆ
ಮಂಡ್ಯ: ಬಸವಣ್ಣನವರ ವಚನ ಸಂದೇಶಗಳು ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸುವಂತಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಬಸವಣ್ಣನವರನ್ನು ಆರಾಧಿಸುವುದಕ್ಕಿಂತ ಅವರ ವಚನ ಸಂದೇಶಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೇ ಜ್ಞಾನದ ಜ್ಯೋತಿ ಬೆಳಗಿಸಿದ ಬಸವಣ್ಣನವರನ್ನು ಪೂಜಿಸುವುದರಿಂದ ಅವರ ಸಂದೇಶವನ್ನೇ ಮರೆಮಾಚಿದಂತಾಗುತ್ತದೆ. ಹಾಗಾಗಿ ಬಸವಣ್ಣನವರ ಆರಾಧನೆಗಿಂತ ಅವರು ತಮ್ಮ ವಚನಗಳ ಮೂಲಕ ನೀಡಿರುವ ಸಂದೇಶಗಳನ್ನು ಅರಿತುಕೊಳ್ಳುವುದು ಮುಖ್ಯ ಎಂದರು.
ಮುಂದಿನ ಪೀಳಿಗೆ ಸಮ ಸಮಾಜದಲ್ಲಿ ನೆಮ್ಮದಿಯಿಂದಿರಬೇಕಾದರೆ ಮಕ್ಕಳಿಗೆ ಬಸವ ತತ್ವಗಳ ಸಾರವನ್ನು ತಿಳಿಸಬೇಕಿದೆ. ಮಕ್ಕಳಿಗೆ ತಿಳಿಸಬೇಕೆಂದರೆ ಮೊದಲು ನಾವು ವಚನಗಳ ಆಶಯಗಳನ್ನು ಅರಿತುಕೊಳ್ಳಬೇಕು. ಬಳಿಕ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರೆ ಅವರು ಗ್ರಹಿಸಲು ಸಾಧ್ಯವಾಗುತ್ತದೆ. ಬಸವಣ್ಣನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸುಮಾರು 1500ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹ ಮಾಡಲಾಗಿದೆ. ಸಮಾನತೆ ಇರಬೇಕು ಎಂದು ಬಯಸಿದ್ದ ಬಸವಣ್ಣ ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿದರು. ಮುಖ್ಯವಾಗಿ ಲಿಂಗ ಅಥವಾ ಸಾಮಾಜಿಕ ತಾರತಮ್ಯ, ಮೂಢನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದ್ದರು. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು ಎಂದು ಹೇಳಿದರು.
ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಡಾ.ಎಂ.ಎಸ್.ಅನಿತಾ, ವಿಶ್ವದ ಇಂದಿನ ಎಲ್ಲ ಸಮಸ್ಯೆಗಳಿಗೆ ಬಸವಣ್ಣನೇ ಪರಿಹಾರ ಎಂಬುದನ್ನು ವಿಸ್ತೃತವಾಗಿ ವಿವರಿಸಿದರು. ಆಧುನಿಕ ವಿಜ್ಞಾನದ ಕೃತಕ ಬುದ್ಧಿಮತ್ತೆ(ಎಐ)ಯನ್ನು ಅವಲಂಬಿಸಿಕೊಂಡು ಮನುಷ್ಯ ತನ್ನ ಅವನತಿಯನ್ನು ತಾನೇ ತಂದುಕೊಳ್ಳುತ್ತಿದ್ದಾನೆಂದು ಆತಂಕ ವ್ಯಕ್ತಪಡಿಸಿದ ಅವರು, ಇಂತಹ ಸನ್ನಿವೇಶದಲ್ಲಿ ಬಸವ ತತ್ವವನ್ನು ಅಳವಡಿಸಿಕೊಳ್ಳದಿದ್ದರೆ ಜೀವ ಸಂಕುಲ ಉಳಿಯಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದರು.
ವಾಸ್ತವದಲ್ಲಿ ನಮ್ಮ ಎಲ್ಲ ಚಳವಳಿಗಳಿಗೂ ಮೂಲವೇ 12ನೇ ಶತಮಾನದ ಬಸವ ಚಳುವಳಿಯಾಗಿದೆ. ರಾತ್ರಿಯ ಅಕ್ರಮಗಳೆಲ್ಲ ಬೆಳಗಿನ ಸಕ್ರಮವಾಗುತ್ತಿರುವ ಇಂದಿನ ಬೆಳವಣಿಗೆಯಲ್ಲಿ ಬಸವಣ್ಣನವರ ಸೂಕ್ಷ್ಮ ಸಂವೇದನೆಯ ವಚನಗಳು ದಾರಿದೀಪವಾಗಿ ಕಾಣುತ್ತವೆ. ಕಾಯಕದಿಂದ ಬಂದ ಹಣವನ್ನು ದಾಸೋಹಕ್ಕೆ ಮಾತ್ರ ಬಳಸಿ ಎಂದಿರುವ ಅವರ ಸಂದೇಶದಲ್ಲಿ ಸಾಮಾಜಿಕ ಧಾರ್ಮಿಕ ವಿವೇಚನೆಯಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಬೇಬಿ ಬೆಟ್ಟದ ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾತನಾಡಿ, ಮೌಢ್ಯತೆಯ ವಿರುದ್ಧ 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಿಶ್ವಗುರು ಬಸವಣ್ಣನವರ ಆದರ್ಶ ಅನುಕರಣೀಯ. ಭವಿಷ್ಯತ್ತಿನಲ್ಲಿ ಯುದ್ಧ ರಹಿತ ಸಮಾಜ ನಿರ್ಮಾಣ ಮಾಡಲು ಬಸವ ತತ್ವ ಅನಿವಾರ್ಯವಾಗಿದೆ. ಅನುಭವ ಮಂಟಪದಲ್ಲಿ ಜಾತಿ, ವರ್ಣ, ವರ್ಗ, ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯನ್ನು ಸಾರಿದ ಅಣ್ಣ ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕೆಂದು ಕರೆ ನೀಡಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡ ಸುಂಡಹಳ್ಳಿ ಸೋಮಶೇಖರ್ ಇತರರಿದ್ದರು.
ಪ್ರತಿಮೆ ಸ್ಥಾಪನೆಗೆ ಆಗ್ರಹ
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾಡಳಿಕ್ಕೆ ಮನವಿ ಮಾಡಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಎಂ.ಎಸ್.ಮಂಜುನಾಥ್, ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು. ಅಲ್ಲದೆ, ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರೆ ಸಾಲದು, ಅವರಿಗೆ ನಿಜವಾಗಿ ಗೌರವ ಸಿಗಬೇಕೆಂದರೆ ಎಸ್.ಡಿ.ಜಯರಾಂ ಬಡಾವಣೆಯಲ್ಲಿ ಬಸವೇಶ್ವರ ಉದ್ಯಾನವನ ಸ್ಥಾಪನೆ ಮಾಡಬೇಕು ಎಂದು ವೇದಿಕೆಯಲ್ಲಿದ್ದ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರಿಗೆ ಮನವಿ ಮಾಡಿದರು.
ಮೆರವಣಿಗೆಗೆ ಎಸ್ಪಿ ಚಾಲನೆ
ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಬಸವೇಶ್ವರರ ಅಲಂಕೃತ ಭಾವಚಿತ್ರವನ್ನಿರಿಸಿದ್ದ ಬೆಳ್ಳಿ ರಥದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಬಸವೇಶ್ವರರಿಗೆ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಚಾಲನೆ ನೀಡಿದರು. ಬಳಿಕ ವಿವಿಧ ಜನಪದ ಕಲಾ ತಂಡಗಳೊಅದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಂಪನ್ನಗೊಂಡಿತು. ಅರ್ಚಕ ಶಿವಲಿಂಗಪ್ಪ, ಬೆಟ್ಟಹಳ್ಳಿ ಮಂಜನಾಥ್, ಎಂ.ಗುರುಪ್ರಸಾದ್, ನಾರಾಯಣಸ್ವಾಮಿ, ರತ್ನಮ್ಮ, ಶಿವಾನಂದ, ಕೆಂಪರಾಜು ಮತ್ತಿತರರಿದ್ದರು.