ಕಿಕ್ಕೇರಿಯಲ್ಲಿ ವಿಪ್ರಬಾಂಧವ ಸಮಿತಿಯವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಶಂಕರ ಸಪ್ತಾಹದಲ್ಲಿ ಶಂಕರ ಪಾದುಕೆ, ಶಿಲೆಗೆ ಪೂಜೆ ಸಲ್ಲಿಸಿದರು. ಅನಿಲ್ ಶಾಸ್ತ್ರಿ, ಕೆ.ಬಿ.ವೆಂಕಟೇಶ್ ಮತ್ತಿತರರಿದ್ದರು.  
ಮಂಡ್ಯ

ವಿಪ್ರವೃಂದ ಸಮಾಜದ ಕಾರ್ಯದರ್ಶಿ ಕೆ.ಬಿ.ವೆಂಕಟೇಶ್ * ಕಿಕ್ಕೇರಿಯಲ್ಲಿ ಶಂಕರ ಶಿಲೆ ಪಾದುಕೆ ಪೂಜೆ

ಕಿಕ್ಕೇರಿ: ನಶಿಸುತ್ತಿದ್ದ ಹಿಂದೂ ಧರ್ಮ ಪುರ್ನಜ್ಜೀವನಗೊಳಿಸಿದ ಅದ್ವೇತ ಶಿಖಾಮಣಿ ಶಂಕರರ ಸ್ಮರಣೆಯಿಂದ ಬದುಕು ಪಾವನವಾಗಲಿದೆ ಎಂದು ವಿಪ್ರವೃಂದ ಸಮಾಜದ ಕಾರ್ಯದರ್ಶಿ ಕೆ.ಬಿ.ವೆಂಕಟೇಶ್ ತಿಳಿಸಿದರು.
ಇಲ್ಲಿನ ಸುಬ್ಬರಾಯ ಛತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಸಪ್ತಾಹ ಹಾಗೂ ಆರಾಧನಾ ಮಹೋತ್ಸವದಲ್ಲಿ ಮಾತನಾಡಿ, ಶಂಕರರು ಬದುಕಿದ್ದು ಕೇವಲ 32ವರ್ಷವಾದರೂ ತಮ್ಮ 8ನೇ ವಯಸ್ಸಿನಲ್ಲಿಯೇ ವೇದಗಳನ್ನು, 12ನೇ ವಯಸ್ಸಿನಲ್ಲಿ ಶಾಸ್ತ್ರಗಳನ್ನು, 16ರಲ್ಲಿ ವೇದ ಉಪನಿಷತ್ತು ಸೇರಿ ಎಲ್ಲದ್ದಕ್ಕೂ ಭಾಷ್ಯವನ್ನು ರಚಿಸಿದ ಜ್ಞಾನಿಗಳು ಎಂದರು.
ಶಂಕರರು ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡುವ ವೇಳೆ ಕಿಕ್ಕೇರಿ ಪುರವಾಸಿಗಳು ಕಾಪಾಲಿಕ, ಯಕ್ಷಿಣಿ ವಿದ್ಯೆ ದುಷ್ಟಶಕ್ತಿ ಉಪಟಳದಿಂದ ಸಂಕಷ್ಟದಲ್ಲಿರುವುದನ್ನು ತೋಡಿಕೊಂಡಾಗ ಶ್ರೀಗಳು ಕಿಕ್ಕೇರಿಗೆ ಆಗಮಿಸಿ ಧ್ಯಾನ ಮಾಡಿದ್ದರು ಎಂಬುದು ಶೃಂಗೇರಿ ಶ್ರೀಗಳಿಂದ ತಿಳಿದಿದೆ. ಶಂಕರರ ಪಾದಸ್ಪರ್ಶದಿಂದ ಪವಿತ್ರವಾಗಿರುವ ಸ್ಥಳವನ್ನು ಶಂಕರ ಧ್ಯಾನಮಂಟಪ ಎಂದು ಅಭಿವೃದ್ಧಿಪಡಿಸಿದರೆ ಆಧ್ಯಾತ್ಮಿಕ ಕ್ಷೇತ್ರವಾಗಿ ಜಗತ್ಪಸಿದ್ಧವಾಗಲಿದೆ ಎಂದು ನುಡಿದರು.
8ನೇ ಶತಮಾನದಲ್ಲಿ ಶಂಕರರು ಧಾರ್ಮಿಕ ತತ್ವಗಳ ಮಂಡನೆಗಳನ್ನು ಮಾಡಿದ ಫಲದಿಂದ ದೇಶ ಇಂದಿಗೂ ಸುಭಿಕ್ಷವಾಗಿದೆ. ದೇಶದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳಾದ ಪೂರ್ವದಲ್ಲಿ ಪುರಿ ಜಗನ್ನಾಥ ಪೀಠ, ಗೋವರ್ಧನ ಮಠ, ಪಶ್ಚಿಮದಲ್ಲಿ ದ್ವಾರಕಾ ಪೀಠ, ಪಶ್ಚಿಮಾಮ್ನಯ ಮಠ, ದಕ್ಷಿಣದಲ್ಲಿ ಶೃಂಗೇರಿ ಪೀಠ, ಶಾರದಾ ಮಠ, ಉತ್ತರದಲ್ಲಿ ಬದರಿನಾಥ ಪೀಠಗಳನ್ನು ಸ್ಥಾಪಿಸಿ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದರು. ಆಚಾರ್ಯರು ರಚಿಸಿದ ಬ್ರಹ್ಮಸೂತ್ರದ ಭಾಷ್ಯ, ಉಪನಿಷತ್‌ಭಾಷ್ಯ ಭಜಗೋವಿಂದಂ, ಸೌಂದರ್ಯಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ ಎಂದರು.
ವೇದಬ್ರಹ್ಮ ಅನಿಲ್‌ಶಾಸ್ತ್ರಿ ಮಾತನಾಡಿ, ತಾಮಸಗುಣ ನಿವಾರಣೆಗಾಗಿ ದೇವರನ್ನು ಆರಾಧಿಸಿ, ಸರಳ ಬದುಕು, ಜಪ ತಪಗಳಿಂದ ಬದುಕು ಹಸನಾಗಲಿದೆ. ನಿತ್ಯ ಪೂಜಾರಾಧನೆಯಿಂದ ನಕಾರಾತ್ಮಕ ಗುಣ, ಚಿಂತನೆ ಎಲ್ಲವೂ ದೂರವಾಗಲಿದೆ ಎಂದು ಹೇಳಿದರು.
ಆರಾಧನೆ, ಶಂಕರ ಸಪ್ತಾಹ ಅಂಗವಾಗಿ ಪುಷ್ಪಾರ್ಚನೆ, ತುಳಸಿ ಅರ್ಚನೆ, ರುದ್ರಾಭಿಷೇಕ, ಕೀರ್ತನೆ, ಭಜನೆ, ಶಂಕರ ವಿಜಯ ಪಾರಾಯಣ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನದಾಸೋಹ, ಉತ್ಸವ ಮತ್ತಿತರ ಪೂಜಾ ಕೈಂಕರ್ಯಗಳು ನಡೆದವು. ಶಂಕರರ ಭಾವಚಿತ್ರವನ್ನು ವಿವಿಧ ಪರಿಮಳ ಪುಷ್ಪಗಳ ಮಾಲೆಯೊಂದಿಗೆ ಶೃಂಗರಿಸಲಾಗಿತ್ತು.
ಶಂಕರರು ಧ್ಯಾನ ಮಾಡಲು ಕುಳಿತಿದ್ದ ಶಂಕರ ಶಿಲೆ ಹಾಗೂ ಪಾದುಕೆಗಳನ್ನು ಪೂಜಿಸಲಾಯಿತು. ಯತು. ಬಳಸಿದ್ದ ವಿಜೃಂಭಣೆಯಿಂದ ನೆರವೇರಿತು.
ಅನಂತಸ್ವಾಮಿ, ಮಹಬಲರಾವ್, ನರಸಿಂಹ, ಕೆ.ಎಸ್.ಪರಮೇಶ್ವರಯ್ಯ, ಚಂದ್ರಶೇಖರಯ್ಯ, ಸೀತಾರಾಮು, ಅನಿಲ್‌ಶಾಸ್ತ್ರಿ, ಗಣೇಶರಾವ್, ಪ್ರಭಾಕರ್, ಮಹಬಲಶರ್ಮ, ನಾಗೇಂದ್ರ ಮತ್ತಿತರರಿದ್ದರು.