ಕೆ.ಆರ್.ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿಯಲ್ಲಿರುವ ಮಹಾಗಣಪತಿ ದೇವಾಲಯ 
ಮಂಡ್ಯ

ಭಕ್ತರ ಬಾಳಿಗೆ ಬೆಳಕು ನೀಡುವ ವಿನಾಯಕ

ಪ್ರಮುಖ ಮುಖ್ಯಾಂಶಗಳು

  • ಇಷ್ಟಾರ್ಥ ಈಡೇರಿಸುವ ಕರುಣಾಮೂರ್ತಿ
  • ದೊಡ್ಡಯಾಚೇನಹಳ್ಳಿಯಲ್ಲಿರುವ ಮಹಾಗಣಪತಿ ದೇವಾಲಯ
ಕೆ.ಆರ್.ಪೇಟೆ: ಜನರ ಕಷ್ಟ, ಕಾರ್ಪಣ್ಯಗಳನ್ನು ನಿವಾರಣೆ ಮಾಡಿ ಬೇಡಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿ ಬಾಳಿಗೆ ಬೆಳಕು ನೀಡುತ್ತಿರುವ ಮಹಾ ಗಣಪತಿ ಭಕ್ತರ ಆರಾಧ್ಯ ದೈವವಾಗಿ ಹೆಸರಾಗಿದೆ.
ತಾಲೂಕಿನ ದೊಡ್ಡಯಾಚೇನಹಳ್ಳಿ ಗ್ರಾಮದ ಮಧ್ಯದಲ್ಲಿರುವ ಹಾಲಿನ ಡೇರಿ ಸಮೀಪ ಪೂರ್ವಾಭಿಮುಖವಾಗಿ ನೆಲೆ ನಿಂತು ಜನರಿಗೆ ಬೇಡಿದ್ದನ್ನು ಕರುಣಿಸುವ ಶಕ್ತಿದೇವರಾಗಿದೆ. ಮಹಾ ಗಣಪತಿ ದೇವರಲ್ಲಿ ಕೋರಿದರೆ ಆಗದು ಎಂಬ ಕಾರ್ಯವೇ ಇಲ್ಲ. ಈತನ ಕರುಣೆಯಿಂದ ಬಾಳಿ ಬದುಕಿದ ಸಹಸ್ರಾರು ಕುಟುಂಬಗಳಿವೆ. ದೇವರ ಶಕ್ತಿ ತಾಲೂಕಿನಾದ್ಯಂತ ಪಸರಿಸಿದೆ. ನಂಬಿದ ಭಕ್ತರ ಆಶಯಗಳನ್ನು ಈಡೇರಿಸುವ ತಂದೆ, ಅದರಲ್ಲೂ ಕಷ್ಟದಲ್ಲಿರುವವರ ಭಕ್ತರ ಕೂಗಿಗೆ ಕೂಡಲೇ ಮನ ಕರಗಿ ಪರಿಹಾರ ನೀಡುವ ಕರುಣಾಮೂರ್ತಿಯಾಗಿದ್ದಾನೆ.
ಭಕ್ತರು ಮನದಲ್ಲಿ ತಮ್ಮ ಇಷ್ಟಾರ್ಥಗಳನ್ನು ಕರುಣಿಸಲು ಕೋರಿ ಹರಕೆ ಹೊತ್ತು ಬರುತ್ತಾರೆ. ಇಷ್ಟಾರ್ಥ ಹರಕೆ ನೆರವೇರಿದ ನಂತರ ದೇವರಿಗೆ ತಮ್ಮ ಹರಕೆ ಸೇವೆಯನ್ನು ತೀರಿಸಿ ಕೃತಾರ್ಥರಾಗುತ್ತಾರೆ. ಮದುವೆ, ಭೂಮಿ ವಿವಾದ, ಸಂತಾನ ಸೇರಿ ಹೀಗೆ ವಿವಿಧ ಹರಕೆಗಳು ಅದರಲ್ಲೂ ಹೆಣ್ಣುಮಕ್ಕಳ ಇಷ್ಟಾರ್ಥಗಳ ಈಡೇರಿಕೆ, ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ. ಹೊಸ ವಾಹನ ಖರೀದಿಸಿದಾಗ ಭಕ್ತರು ಒಳಿತಿಗಾಗಿ ಪೂಜೆ ಸಲ್ಲಿಸುವುದು ವಾಡಿಕೆ. ದೇವರಿಗೆ ಪ್ರತಿದಿನ ಪೂಜೆ ನೆರವೇರುತ್ತದೆ. ವಿಶೇಷವಾಗಿ ಚೌತಿ ದಿನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಅಂದು ದೇವರಿಗೆ ವಿವಿಧ ಪುಷ್ಪಾಲಂಕಾರ, ಅರಿಶಿಣ, ಕುಂಕುಮ, ಭಸ್ಮ, ಶ್ರೀಗಂಧದಿಂದ ಅಲಂಕರಿಸಲಾಗುತ್ತದೆ. ದೇವರಿಗೆ ಸಜ್ಜಿಗೆ, ಸಿಹಿಪೊಂಗಲ್, ಮೊಸರನ್ನ, ಸಿಹಿ ಕಡಬು ನೈವೇದ್ಯವಿಟ್ಟು ಪೂಜಾ ಕೈಂಕರ್ಯ ನೆರವೇರಿಸುತ್ತಾರೆ.
ದೇವರ ಐತಿಹ್ಯ: ಗ್ರಾಮದ ಹೊರಗಡೆ ಗ್ರಾಮ ದೇವರಾದ ಬಸವಣ್ಣ ದೇವಸ್ಥಾನವಿತ್ತು. ಗ್ರಾಮದೊಳಗಡೆ ಯಾವುದೇ ದೇವಸ್ಥಾನ ಇಲ್ಲದ್ದರಿಂದ ಗ್ರಾಮಸ್ಥರು ಹದಿನೈದು ವರ್ಷಗಳ ಹಿಂದೆ ಗ್ರಾಮಕ್ಕೆ ದೇವರ ಅನುಗ್ರಹ ಇರಲಿ ಎಂದು ಗಣೇಶನ ಗುಡಿ ನಿರ್ಮಿಸಲು ತೀರ್ಮಾನಿಸಿದರು. ಗ್ರಾಮಸ್ಥರು ಹಣಕಾಸಿನ ನೆರವನಿಂದ ದೇವಸ್ಥಾನ ನಿರ್ಮಿಸಿದ್ದಾರೆ. ಹಣಕಾಸಿನ ಕೊರತೆಯಿಂದ ಕೆಲ ಕಾಲ ದೇವಸ್ಥಾನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಹೊರಗಿನ ಭಕ್ತರಿಂದ ಹಣಕಾಸಿನ ನೆರವು ಪಡೆದು ನಿರ್ಮಿಸಿದ್ತರು. ನೂತನವಾಗಿ ನಿರ್ಮಿಸಿದ ದೇವರಿಗೆ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ನಿರ್ಮಾಣ ಹಣದಲ್ಲಿ 3 ಲಕ್ಷ ರೂ. ಉಳಿತಾಯವಾಗಿದ್ದು, ಗ್ರಾಮಸ್ಥರು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ. ಇದರಲ್ಲಿ ಬರುವ ಬಡ್ಡಿ ಹಣದಲ್ಲಿ ಅರ್ಚಕರಿಗೆ ಮಾಸಿಕ ವೇತನ, ಪೂಜಾ ಕೈಂಕರ್ಯಗಳ ಖರ್ಚನ್ನು ಭರಿಸಲಾಗುತ್ತಿದೆ.
ಮಹಾ ಗಣಪತಿ ದೇವಸ್ಥಾನದ ಪಕ್ಕದಲ್ಲಿ ನವಗ್ರಹ ದೇವಸ್ಥಾನವಿದೆ. ನವಗ್ರಹ ದೇವಸ್ಥಾನಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರು ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ನವಗ್ರಹ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ.
ವಿಶೇಷ ಪೂಜೆ: ಪ್ರತಿದಿನ ಬೆಳಗ್ಗೆ ಪೂಜಾ ಕೈಂಕರ್ಯ ನೆರವೇರುತ್ತದೆ. ಗಣೇಶ ಹಬ್ಬದಂದು ದೇವರಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಯುಗಾದಿ, ದೀಪಾವಳಿ, ಸಂಕ್ರಾಂತಿ, ಶಿವರಾತ್ರಿ, ರಾಮನವಮಿ, ವೈಕುಂಠ ಏಕಾದಶಿ, ಹನುಮ ಜಯಂತಿ, ಬಸವ ಜಯಂತಿಯಲ್ಲಿ ಗಣೇಶನಿಗೆ ವಿಶೇಷ ಪೂಜೆ ನೆರವೇರುತ್ತದೆ. ಒಂದು ತಿಂಗಳು ಧನುರ್ಮಾಸ ಪೂಜೆಗಳು ನಡೆಯುತ್ತವೆ. ಈ ವೇಳೆ ಪಂಚಾಭಿಷೇಕ, ವಿಶೇಷಾಲಂಕಾರ, ಪೂಜೆ ಪುನಸ್ಕಾರಗಳು, ಹೋಮ-ಹವನಗಳು ನೆರವೇರುತ್ತವೆ. ಈ ವೇಳೆ ಗಣೇಶ ಮಂತ್ರಗಳು ಮೇಳೈಸುತ್ತವೆ. ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರಿಗೆ ಕೃತಾರ್ಥರಾಗುತ್ತಾರೆ. ಹರಕೆ ಹೊತ್ತ ಭಕ್ತರು ಗಣೇಶನಿಗೆ ಹಲವು ಅಭಿಷೇಕಗಳನ್ನು ಸಂಕಲ್ಪ ಈಡೇರಿದ ನಂತರ ನೆರವೇರಿಸುತ್ತಾರೆ.

ಪ್ರತಿ ತಿಂಗಳು ಚೌತಿ ದಿನದಲ್ಲಿ ಮಹಿಳೆಯರು ಉಪವಾಸವಿದ್ದು, ದೇವರಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಗಣೇಶನಲ್ಲಿ ಪ್ರಾರ್ಥಿಸುತ್ತಾರೆ. ಅಂದು ದೇವಸ್ಥಾನದಲ್ಲಿ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಚೌತಿ ದಿನ ಉಪವಾಸ ಇದ್ದು, ದೇವರಲ್ಲಿ ಪ್ರಾರ್ಥಿಸಿದರೆ, ಇಷ್ಟಾರ್ಥ ಸಿದ್ಧಿಯಾಗಲಿದೆ ಎಂಬುದು ಭಕ್ತರ ನಂಬಿಕೆ.
ದೇಗುಲಕ್ಕೆ ತಲುಪುವ ಮಾರ್ಗ: ಮೈಸೂರು, ಮಂಡ್ಯ, ಹಾಸನದಿಂದ ಬಸ್‌ನಲ್ಲಿ ಬರುವವರು ಕೆ.ಆರ್.ಪೇಟೆ ಮೂಲಕ, ರೈಲ್ವೆಯಲ್ಲಿ ಬರುವವರು ಅಕ್ಕಿಹೆಬ್ಬಾಳಿಗೆ ಬಂದು ಅಲ್ಲಿಂದ ದೊಡ್ಡಯಾಚನಹಳ್ಳಿ ಗ್ರಾಮದೊಳಗಡೆ ಬಂದರೆ ದೇವಸ್ಥಾನ ಸಿಗುತ್ತದೆ. ಕೆ.ಆರ್.ಪೇಟೆಯಿಂದ ದೇವಸ್ಥಾನಕ್ಕೆ 8 ಕಿಮೀ ಅಂತರವಿದೆ. ಅಕ್ಕಿಹೆಬ್ಬಾಳಿನಿಂದ 3 ಕಿಮೀ ಅಂತರದಲ್ಲಿದೆ.
ಗಣೇಶ ಗ್ರಾಮದ ರಕ್ಷಕನಾಗಿದ್ದಾನೆ. ದೇವರನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತೇವೆ. ನಮ್ಮೆಲ್ಲರನ್ನು ಸಂಕಷ್ಟದಲ್ಲಿದ್ದಾಗ ಅವರು ರಕ್ಷಿಸಿದ್ದಾರೆ. ಕಷ್ಟ ಬಂದೊಡನೆ ದೇವರ ಮೊರೆ ಹೋಗಿ ಪರಿಹಾರ ಬೇಡುತ್ತೇವೆ. ಯಾವುದೇ ಸಮಸ್ಯೆ ಬಂದರೂ ಪರಿಹರಿಸಕೊಡುತ್ತಾನೆ. ಅವರ ಅಭಯದಿಂದ ನೆಮ್ಮದಿಯಾಗಿದ್ದೇವೆ.
ಪ್ರದೀಪ್, ಭಕ್ತ ದೊಡ್ಡಯಾಚೇನಹಳ್ಳಿ
ಹಲವು ವರ್ಷದಿಂದ ದೇವರಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ಭಕ್ತರು ಬೇಡಿದ್ದನ್ನು ಗಣೇಶ ಈಡೇರಿಸಿದ್ದಾನೆ. ಸಾಕಷ್ಟು ಭಕ್ತರು ಪ್ರತಿದಿನ ಕಷ್ಟ, ಕಾರ್ಪಣ್ಯಗಳ ನಿವಾರಣೆಗಾಗಿ ದೇವರ ಮೊರೆ ಹೋಗುತ್ತಾರೆ. ಅವರೆಲ್ಲರಿಗೂ ಸಮಸ್ಯೆ ನಿವಾರಣೆಯಾಗಿ ಒಳ್ಳೆಯದಾಗಿದೆ. ನಮ್ಮ ಜನರ ರಕ್ಷಣೆಯನ್ನು ಸದಾ ಮಾಡುತ್ತಿದ್ದಾರೆ. ಭಕ್ತರ ಕಷ್ಟವನ್ನು ಬಹು ಬೇಗ ದೇವರು ನಿವಾರಿಸುತ್ತಿದ್ದಾರೆ.
ಚಂದ್ರಶೇಖರ್, ಅರ್ಚಕ, ಗಣಪತಿ ದೇವಸ್ಥಾನ, ದೊಡ್ಡಯಾಚೇನಹಳ್ಳಿ.