ಬೋರಾಪುರ ಗ್ರಾಮದಲ್ಲಿ ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಾರ್ಷಿಕ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉದ್ಘಾಟಿಸಿದರು. ಡಾ.ಎಂ.ಎಸ್.ಮಹದೇವಸ್ವಾಮಿ, ಬಿ.ಕೆ. ಕೃಷ್ಣ, ನಿಜಲಿಂಗು, ಶಿವಸ್ವಾಮಿ ಇತರರು ಇದ್ದರು.
ಕೆ.ಎಂ.ದೊಡ್ಡಿ: ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ಸಹಕಾರ ನೀಡಿದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.
ಸಮೀಪದ ಬೋರಾಪುರ ಗ್ರಾಮದಲ್ಲಿ ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಮೂಲ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಶ್ರಮಿಸಲಿದ್ದಾರೆ ಎಂದರು.
ಗ್ರಾಮಕ್ಕೆ ನೂರಾರು ಶಿಬಿರಾರ್ಥಿಗಳು ಆಗಮಿಸಿದ್ದು, ಅವರನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಗೆ ಒಂದಷ್ಟು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದರೆ ಶಿಬಿರಾರ್ಥಿಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿ ಗ್ರಾಮದ ಅಭಿವೃದ್ಧಿಯಾಗಲಿದೆ. ಪ್ರತಿವರ್ಷ ಒಂದೊಂದು ಹಳ್ಳಿಗಳನ್ನು ಆಯ್ದುಕೊಂಡು ಕೆರೆ, ಕಟ್ಟೆ ಮತು ಸ್ಮಶಾನಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತ ಬರುತ್ತಿದ್ದು, ಶಿಬಿರಾರ್ಥಿಗಳ ಜತೆಗೆ ಗ್ರಾಮಸ್ಥರು ಕೈ ಜೋಡಿಸಬೇಕು ಎಂದರು.
ಭಾರತೀ ವಿದ್ಯಾ ಸಂಸ್ಥೆ ಸದಾ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಲಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನಗಳ ಬಗ್ಗೆ ಅರಿವು ಮೂಡಿಸಿ ಶಿಬಿರಾರ್ಥಿಗಳು 7 ದಿನಗಳ ಕಾಲ ಗ್ರಾಮದಲ್ಲಿ ಉಳಿದು ಶ್ರಮದಾನ ಮತ್ತು ರಚಾನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಟಿ ಬದ್ಧರಾಗಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಭಾರತೀ ವಿದ್ಯಾಸಂಸ್ಥೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಗ್ರಾಮದಲ್ಲಿ ಶ್ರಮದಾನ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಗ್ರಾಮದ ನೈರ್ಮಲ್ಯ, ಪರಿಸರ ಸಂರಕ್ಷಣೆ, ಶಿಕ್ಷಣ, ಜಾತ್ಯತೀತತೆ, ಸಮಾನತೆ, ರಾಷ್ಟ್ರೀಯತೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಬಿ.ಕೆ. ಕೃಷ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ನಿಜಲಿಂಗು, ಶಿವಸ್ವಾಮಿ, ಮೋನಾಲಿಸಾ, ಡಿ.ಎಲ್.ಸರಿತಾ, ಸೊಸೈಟಿ ಅಧ್ಯಕ್ಷ ಬಿ.ಸಿ.ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಸ್.ಶೇಖರ್, ಭರತೇಶ್, ಪ್ರಕಾಶ್, ರಮೇಶ, ಮುಖಂಡರಾದ ಚಿಕ್ಕ ಹೈದಶೆಟ್ಟಿ, ಬಿ.ಜೆ.ದಿನೇಶ್, ಬಿ.ಸಿದ್ದೇಗೌಡ, ಕೃಷ್ಣ, ಮಲ್ಲೇಗೌಡ, ರಾಜೇಂದ್ರ, ಚಿಕ್ಕಪುಟ್ಟಯ್ಯ, ಬಿ.ಜೆ.ಮಹೇಶ್, ತಮ್ಮಯ್ಯ, ಮಲ್ಲೇಶ್ ಸೇರಿದಂತೆ ಮತ್ತಿತರಿದ್ದರು.