ಶ್ರೀರಂಗಪಟ್ಟಣದ ಶ್ರೀ ಆದಿರಂಗನಾಥ ಸ್ವಾಮಿಗೆ ಮಂಗಳವಾರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. 
ಮಂಡ್ಯ

ಶ್ರೀರಂಗನಾಥ ಸ್ವಾಮಿ ದರ್ಶನಕ್ಕೆ ಸಹಸ್ರಾರು ಭಕ್ತರು

ಲಲಾಟಾಕ್ಷ ಎಸ್
ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಪ್ರಯುಕ್ತ ಶ್ರೀರಂಗನಾಥ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಆದಿರಂಗನ ದರ್ಶನ ಪಡೆದರು.
ದೇವಾಲಯದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಪ್ರಧಾನ ಅರ್ಚಕ ಪ್ರಸನ್ನ ನೇತೃತ್ವದಲ್ಲಿ ಸಾರಥಿ ಅವರ ನಿರ್ದೇಶನದಂತೆ 18ಅಡಿ ಉದ್ದದ ಸಾಲಿಗ್ರಾಮ ಶಿಲೆಯ ಆದಿಶೇಷ ಸ್ವರೂಪಿ ಶ್ರೀ ಆದಿರಂಗನಾಥಸ್ವಾಮಿ ಸೇರಿದಂತೆ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಪಂಚಲೋಹದ ಉತ್ಸವಮೂರ್ತಿಗೆ ಸುಪ್ರಭಾತ ಸೇವೆ, ತಿರುಪಾವೈ, ಅಭಿಷೇಕ, ಆರಾಧನೆ, ಸೇವಾಕಾಲ, ಶಾತಮೊರೈ ಜತೆಗೆ ಧರ್ನುಮಾಸದ ಪೂಜಾ ಕೈಂಕರ್ಯಗಳ ಅರ್ಪಣೆಯೊಂದಿಗೆ ಮಹಾಮಂಗಳಾರತಿ ನೆರವೇರಿದವು. ಮುಂಜಾನೆ 4 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಧರ್ನುಮಾಸ ಹಿನ್ನೆಲೆಯಲ್ಲಿ ತ್ರಿರಂಗ ದರ್ಶನ ಮಾಡುವ ಸಂಕಲ್ಪಹೊತ್ತ ಸಹಸ್ರಾರು ಭಕ್ತರು ಪಟ್ಟಣಕ್ಕೆ ಸೋಮವಾರ ತಡರಾತ್ರಿಯೇ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದರು. ಕೊರೆಯುವ ಚಳಿ ನಡುವೆ ಕಾವೇರಿಯಲ್ಲಿ ಮಿಂದು ಸರತಿ ಸಾಲಿನಲ್ಲಿ ದರ್ಶನಕ್ಕೆ ಕಾದು ನಿಂತಿದ್ದರು.
ತಾಲೂಕಿನ ಶ್ರೀನಿವಾಸ ಅಗ್ರಹಾರ ಸಮೀಪದ ಕರಿಘಟ್ಟ ಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯಕ್ಕೂ ವೈಕುಂಠ ಏಕಾದಶಿ ಹಿನ್ನೆಲೆ ಸಹಸ್ರಾರು ಭಕ್ತರು ಆಗಮಿಸಿದ್ದರು. ಶ್ರೀಯೋಗ ಶ್ರೀನಿವಾಸ, ಭೋಗ ಶ್ರೀನಿವಾಸ ಹಾಗೂ ಲಕ್ಷ್ಮೀದೇವಿಯೊಂದಿಗೆ ಶ್ರೀನಿವಾಸ ವೆಂಕಟರಮಣ ಸ್ವಾಮಿ ದರ್ಶನ ಪಡೆದರು. ಸ್ವಾಮಿಗೆ ಸೇವಾರಾಧನೆ, ಶಾತಮೊರೈ ಪೂಜೆ ಸಲ್ಲಿಸಲಾಯಿತು.
ತಾಲೂಕಿನ ಅರಕೆರೆ ಹೋಬಳಿಯ ಬನ್ನಹಳ್ಳಿ ಗ್ರಾಮದ ಶ್ರೀ ತಿರುಮಲ ತಿಮ್ಮಪ್ಪ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಪೀಹಳ್ಳಿ, ನೇರಳೆಕೆರೆ, ಕೊಡಿಯಾಲ, ಅರಕೆರೆ ಗ್ರಾಮಗಳಿಂದ ಜನರು ಆಗಮಿಸಿದ್ದರು.