ವೀರಭದ್ರೇಶ್ವರ ಹಾಗೂ ವೇಣುಗೋಪಾಲಸ್ವಾಮಿ ದೇವರ ಅಡ್ಡೆದೇವರ ಮೆರವಣಿಗೆ 
ಮಂಡ್ಯ

ವೀರಭದ್ರೇಶ್ವರ, ವೇಣುಗೋಪಾಲ ಸ್ವಾಮಿ ಮೆರವಣಿಗೆ

ಶಿವಶಂಕರ್ ಎಂ. ಹೆಬ್ಬಳ್ಳ
ಕಿಕ್ಕೇರಿ : ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ವೀರಭದ್ರೇಶ್ವರ ಹಾಗೂ ವೇಣುಗೋಪಾಲಸ್ವಾಮಿ ದೇವರ ಅಡ್ಡೆದೇವರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ವಾರ್ಷಿಕವಾಗಿ ನಡೆಯುವ ರಂಗದ ಹಬ್ಬದ ಸಲುವಾಗಿ 15ದಿನಗಳ ಹಿಂದೆಯೇ ಗ್ರಾಮದ ರಂಗಸ್ಥಳದಲ್ಲಿ ರಂಗ ಕರಕು ಹಾಕಲಾಗಿತ್ತು. ಮಂಟಲ ಪೂಜೆ ನೆರವೇರಿಸಿ ಗ್ರಾಮದಲ್ಲಿ ಯಾವುದೇ ರೀತಿ ಮೆಣಸಿನಕಾಯಿ, ಖಾರ ಪದಾರ್ಥ ಮಾಡದಂತೆ ಗ್ರಾಮಸ್ಥರು ಶ್ರದ್ಧಾಭಕ್ತಿಯ ಆಚರಣೆ ಮಾಡಿಕೊಂಡಿದ್ದರು.
ಮಂಡಲ ಪೂಜಾ ಕಾರ್ಯ ಮುಗಿದ ತರುವಾಯ ಗ್ರಾಮದಲ್ಲಿರುವ ವೀರಭದ್ರೇಶ್ವರ ಸ್ವಾಮಿ, ವೇಣುಗೋಪಾಲಸ್ವಾಮಿ ಗುಡಿಯಿಂದ ಉತ್ಸವಮೂರ್ತಿ ಮೆರವಣಿಗೆ ಗುರುವಾರ ಸಜ್ಜುಗೊಳಿಸಿದರು. ವಿವಿಧ ಆಭಿಷೇಕ, ಪೂಜಾ ವಿಧಿ ವಿಧಾನ ನೆರವೇರಿಸಿದರು. ದೇವರಿಗೆ ವಸ್ತ್ರ, ಆಭರಣ, ಪುಷ್ಪಾಲಂಕಾರ ಮಾಡಿದರು. ದೇವರಿಗೆ ಗುಡಿಯಲ್ಲಿ ಅಗ್ರಪೂಜೆಯಾಗಿ ದೀಪ, ಧೂಪಧಾರತಿ ಬೆಳಗಿದರು. ಪಂಜಿನ ಸೇವೆ ಮಾಡಿ ಮಂಗಳವಾದ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಪ್ರತಿ ಮನೆಗಳಿಗೂ ದೇವರ ಮೆರವಣಿಗೆ ಸಾಗಿತು. ಭಕ್ತರು ದೇವರಿಗೆ ಆರತಿ ಬೆಳಗಿ ಸಂಭ್ರಮದಿಂದ ಸ್ವಾಗತಿಸಿದರು. ಹಣ್ಣು, ಕಾಯಿ ಅರ್ಪಿಸಿ ರಸಾಯನ ತಯಾರಿಸಿ ದೇವರಿಗೆ ಸಮರ್ಪಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು.