ಮದ್ದೂರು: ಕೀರ್ತಿ ಶೇಷರಾದ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಎಚ್.ಕೆ.ವೀರಣ್ಣಗೌಡರ 128ನೇ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಸ್.ಎಂ.ಕೃಷ್ಣ ಅವರ 95ನೇ ಜನ್ಮ ಜಯಂತ್ಯುತ್ಸವದ ಅಂಗವಾಗಿ ಮೇ 2 ರಂದು ಪದ್ಮಶ್ರೀ ಪುರಸ್ಕೃತ ಪುಸ್ತಕ ಮನೆಯ ಎಂ.ಅಂಕೇಗೌಡ ದಂಪತಿಗೆ ವೀರಣ್ಣಗೌಡ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್ ಬುಧವಾರ ಹೇಳಿದರು.
ಎಚ್.ಕೆ.ವಿ ನಗರದ ವೀರಣ್ಣಗೌಡ ಕಾಲೇಜು ಸಭಾಂಗಣದಲ್ಲಿ ಕೆಂಗೇರಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸತ್ ಕೀರ್ತಿನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಿಗೆ, ಜೀವನ ಶಿಲ್ಪಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಹಾಗೂ ದರ್ಶನ್ ಮರಿಯಪ್ಪ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ.ಚಂದು ಅಭಿನಂದಿಸಲಿದ್ದಾರೆ ಎಂದರು.
ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಂದು ತಿಳಿಸಿದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಪ್ರಶಸ್ತಿ ಪುರಸ್ಕತರನ್ನು ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಖಜಾಂಚಿ ಜಿ.ಎಸ್.ಶಿವರಾಮು ಭಾಗವಹಿಸಲಿದ್ದಾರೆ ಎಂದು ಅಪೂರ್ವಚಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಡಾ.ಎಸ್.ಸಿ.ಕಿರಣ್, ಯು.ಎಸ್.ಶಿವಕುಮಾರ್, ಮುಖ್ಯ ಶಿಕ್ಷಕರಾದ ಮಹೇಶ, ಎಂ.ಟಿ.ಚಂದ್ರಶೇಖರ್, ಉಪನ್ಯಾಸಕರಾದ ಪಂಚಲಿಂಗೇಗೌಡ, ಡಾ.ಸಂದೀಪ, ಪ್ರದೀಪ, ಚಂದನ್, ಡಾ.ಸ್ಮಿತಾ, ನಂದಿನಿ ಇದ್ದರು.