ಕಿಕ್ಕೇರಿ ಹೋಬಳಿಯ ದೊಡ್ಡತರಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ರಥೋತ್ಸವ ಸಂಭ್ರಮದಿಂದ ಮಂಗಳವಾರ ಸಂಜೆ ಜರುಗಿತು.  
ಮಂಡ್ಯ

ವೀರಭದ್ರೇಶ್ವರಸ್ವಾಮಿ ರಥೋತ್ಸವ

ಕಿಕ್ಕೇರಿ: ಹೋಬಳಿಯ ದೊಡ್ಡತರಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ರಥೋತ್ಸವ ಜರುಗಿತು.
ವಾರದಿಂದ ಜಾತ್ರಾ ಸಡಗರ ಆರಂಭವಾಗಿ ನಿತ್ಯ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ಮಂಗಳವಾರ ವೀರಭದ್ರೇಶ್ವರಸ್ವಾಮಿ, ಭದ್ರಕಾಳಿದೇವಿ, ಗ್ರಾಮದೇವತೆ ಸಹೋದರಿ ಲಕ್ಷ್ಮೀದೇವಿಯ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು.
ಬುಧವಾರ ರಥೋತ್ಸವ ಹಿನ್ನೆಲೆಯಲ್ಲಿ ವೀರಭದ್ರೇಶ್ವರಸ್ವಾಮಿ ಅಡ್ಡೆದೇವರನ್ನು ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿಸಿ ಅಗ್ರ ಪೂಜೆ ಸಲ್ಲಿಸಲಾಯಿತು. ರಥದ ಅಷ್ಟದಿಕ್ಕುಗಳಿಗೆ ಬಲಿಯನ್ನು, ಮಹಾಪೂಜೆ ನೆರವೇರಿಸಿ ನಿರ್ವಿಘ್ನವಾಗಿ ರಥೋತ್ಸವ ನೆರವೇರಲು ಪ್ರಾರ್ಥಿಸಲಾಯಿತು. ದೇಗುಲ ಪ್ರಧಾನ ಅರ್ಚಕರು ದೇವರಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ವಿವಿಧ ವರ್ಣಗಳ ಬಾವುಟ, ಪರಿಮಳ ಪುಷ್ಪಗಳ ಹಾರಗಳಿಂದ ಸಿಂಗರಿಸಿದ್ದ ಮಹಾರಥವನ್ನು ಭಕ್ತರು ಭಕ್ತಿಯಿಂದ ಎಳೆದರು. ವೀರಭದ್ರೇಶ್ವರ ಉಘೇ ಉಘೇ ಎಂದು ಹಣ್ಣು ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಇಟ್ಟರು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಧರಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಒಪ್ಪಿಸಿದರು.

ಗ್ರಾಮಸ್ಥರು ಯುವಕರೊಂದಿಗೆ ಜತೆಗೂಡಿ ಗೆಜ್ಜೆಕಟ್ಟಿಕೊಂಡು ದೇವರಿಗೆ ರಂಗ ಕುಣಿತ ಸೇವೆ ಸಲ್ಲಿಸಿದರು. ಕೊಂಡೋತ್ಸವಕ್ಕಾಗಿ ತರಲಾಗಿದ್ದ ಮರದ ಭಾರಿ ಕಟ್ಟಿಗೆಗಳಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಬುಧವಾರ ಸೂರ್ಯೋದಯಕ್ಕೂ ಮುನ್ನ ಅರ್ಚಕರು ಕೆಂಡ ಕೊಂಡ ಹಾಯ್ದ ಮೇಲೆ ಹರಕೆ ಹೊತ್ತ ಭಕ್ತರು ವೀರಭದ್ರೇಶ್ವರನ ಪ್ರಾರ್ಥಿಸುತ್ತಾ ಅರ್ಚಕರ ಹಿಂದೆ ಹಿಂಬಾಲಿಸಿದರು.
ಅನ್ನ ದಾಸೋಹ ಹಮ್ಮಿಕೊಳ್ಳಲಾಯಿತು. ಭಕ್ತರು, ದಾನಿಗಳು ನೀರು ಮಜ್ಜಿಗೆ ಪಾನಕ, ಕೋಸಂಬರಿ, ಹಣ್ಣು ತುಪ್ಪ ರಸಾಯನ, ವಿವಿಧ ಬಗೆಯ ಹಣ್ಣಿನ ಪಾನೀಯವನ್ನು ವಿತರಿಸಿದರು. ವಿವಿಧ ಗ್ರಾಮಗಳ ಮಹಿಳಾ ತಂಡದವರು ಕೋಲಾಟ ಪ್ರದರ್ಶಿಸಿ ರಂಜಿಸಿದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ , ಶಾಸಕ ಎಚ್.ಟಿ.ಮಂಜು, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ಶಂಕರ ಮೂಲೆಹಟ್ಟಿ, ದೇವರ ಒಕ್ಕಲಿನ ಸದ್ಭಕ್ತರು ಇದ್ದರು.