ವೀರಭದ್ರೇಶ್ವರ ದೇವರ ಮೂರ್ತಿಯ ಜತೆ ವೀರಗಾಸೆ ಕುಣಿತದ ಕಲಾವಿದರು 
ಮಂಡ್ಯ

ಶಿವಪಾರ್ವತಿ ರೂಪ ವೀರಭದ್ರಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಧನಗೂರು ಮಠದ ಶ್ರೀ ಮುಮ್ಮಡಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ
ಹಲಗೂರು: ಇಲ್ಲಿನ ನಡುಕೇರಿ ವೀರಭದ್ರಸ್ವಾಮಿಯ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಅಪಾರ ಭಕ್ತಾದಿಗಳೊಡನೆ ಭಕ್ತಿಯಿಂದ ಎರಡು ದಿನಗಳ ಕಾಲ ಆಚರಿಸಲಾಯಿತು.
ಗುರುವಾರ ಸಂಜೆ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ ,ನವಗ್ರಹ ಪೂಜೆ, ವಾಸ್ತು ರಾಕ್ಷೋಜ್ಞ ಪೂಜೆ, ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.
ಶುಕ್ರವಾರ ಬೆಳಗಿನ ಜಾವ ವೀರಭದ್ರೇಶ್ವರ ದೇವರ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನಡೆಸಿ, ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿಕೇಂದ್ರ ಸ್ವಾಮೀಜಿ, ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ವಿಶೇಷ ಪೂಜೆ ನಡೆಸಲಾಯಿತು.
ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಶಿವನ ಅಪೇಕ್ಷೆಯಂತೆ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ವೀರಭದ್ರಸ್ವಾಮಿ ಅವತಾರವೆತ್ತಿ ದುಷ್ಟ ದಕ್ಷನನ್ನು ಸಂಹರಿಸಿ ದುಷ್ಟ ಶಿಕ್ಷಕನಾಗಿ ಶಿಷ್ಟ ರಕ್ಷಕನಾಗುತ್ತಾನೆ. ಆದ್ದರಿಂದ ಗ್ರಾಮಗಳಲ್ಲಿ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿಯನ್ನು ಶಿವ ಪಾರ್ವತಿಯರ ಮತ್ತೊಂದು ರೂಪವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಈ ದೇವರು ಗ್ರಾಮವನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಹಲಗೂರಿನಲ್ಲಿ ವೀರಭದ್ರ ಸ್ವಾಮಿ ದೇವಾಲಯವನ್ನು ಪುನರುಜ್ಜೀವನಗೊಳಿಸಿ ಹೊಸ ದೇವಾಲಯ ನಿರ್ಮಿಸಿ 15ನೇ ವರ್ಷ ಪೂರೈಸಿರುವುದರಿಂದ ಭಕ್ತಾದಿಗಳು ಸೇರಿ ವಾರ್ಷಿಕೋತ್ಸವವನ್ನು ಭಕ್ತಿಯಿಂದ ಆಚರಿಸಿದ್ದಾರೆ ಎಂದರು.
ವೀರಶೈವ ಸಮಾಜದ ಮುಖಂಡರು, ಯುವ ಮುಖಂಡರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.