ಕಿಕ್ಕೇರಿಯ ಕಿಕ್ಕೇರಮ್ಮ ದೇಗುಲದಲ್ಲಿ ಸೋಮವಾರ ಆಯೋಜಿಸಿದ್ದ ಪಂಚಮಿ ಪೂಜೆಯಲ್ಲಿ ಮಹಿಳೆಯರು ಲಲಿತ ಸಹಸ್ರನಾಮಾವಳಿ ಪಠಣೆ ಮಾಡಿದರು . 
ಮಂಡ್ಯ

ಕಿಕ್ಕೇರಮ್ಮ ದೇವಿಗೆ ವಿವಿಧ ಪೂಜೆ, ಹೋಮ

ಪ್ರಮುಖ ಮುಖ್ಯಾಂಶಗಳು

  • ಅವಳಿ ಗ್ರಾಮಗಳಾದ ಲಕ್ಷ್ಮೀಪುರ-ಕಿಕ್ಕೇರಿ
  • ಗ್ರಾಮದೇವತೆ ಕಿಕ್ಕೇರಮ್ಮ ದೇವಿ ಜಾತ್ರಾ ಮಹೋತ್ಸವ
ಕಿಕ್ಕೇರಿ: ಅವಳಿ ಗ್ರಾಮಗಳಾದ ಲಕ್ಷ್ಮೀಪುರ-ಕಿಕ್ಕೇರಿ ನಡುವೆ ನೆಲೆಸಿರುವ ಗ್ರಾಮದೇವತೆ ಕಿಕ್ಕೇರಮ್ಮ ದೇವಿ ಜಾತ್ರಾ ಮಹೋತ್ಸವದ ಪಂಚಮಿ ದಿನವಾದ ಸೋಮವಾರ ವಿಪ್ರ ಸಮುದಾಯದ ಪಂಚಮಿ ಸೇವಾ ಸಮಿತಿ, ಜೋಯಿಸ್ ಪರಿವಾರದಿಂದ ವಿವಿಧ ಪೂಜೆ, ಹೋಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ದೇವಿ ಪೂಜಿಸಲು ವಿಪ್ರ ವೃಂದದವರು ತಂಡೋಪತಂಡವಾಗಿ ಆಗಮಿಸಿದ್ದರು. ಹೋಬಳಿಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಜಿಲ್ಲೆ, ಹೊರಜಿಲ್ಲೆಗಳಿಂದ ದೇವಿಯ ಆರಾಧಕರು ಕುಟುಂಬ ಸಮೇತರಾಗಿ ಪೂಜಾರಾಧನೆಯಲ್ಲಿ ಪಾಲ್ಗೊಂಡಿದ್ದರು. ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ಗಂಗಾಜಲಾಭಿಷೇಕ ನೆರವೇರಿಸಿದರು. ಪಂಚಾಮೃತ, ವಿವಿಧ ದ್ರವ್ಯಗಳ ಅಭಿಷೇಕ ನೆರವೇರಿಸಿದರು. ಪರಿಮಳ ಪುಷ್ಪಗಳಿಂದ ದೇವಿಯನ್ನು ಅಲಂಕರಿಸಿ, ಒಡವೆ, ವಸ್ತ್ರಗಳಿಂದ ಶೃಂಗರಿಸಿ ವೇದಪಾರಾಯಣ ಮಾಡಿದರು. ಧೂಪ ದೀಪಾಧಾರತಿ ಬೆಳಗಿದರು. ದೇವಿಗೆ ಸೀರೆ, ಕುಪ್ಪಸ, ಬಳೆ, ಬೆಲ್ಲ, ಅಕ್ಕಿ ಮತ್ತಿತರ ಮಂಗಳದ್ರವ್ಯ ವಸ್ತುಗಳಿಂದ ಮಡಿಲು ತುಂಬಿದರು. ಸುಹಾಸಿನಿ ಪೂಜೆ, ಲಲಿತಾ ಸಹಸ್ರನಾಮಾವಳಿ, ಕುಂಕುಮಾರ್ಚನೆ ಮತ್ತಿತರ ಅರ್ಚನೆಗಳನ್ನು ದೇವಿಗೆ ಅರ್ಪಿಸಿದರು.
ಮೂಲದೇವಿ, ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಿ ದೇವಿಯ ಮುಂದೆ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ನಂತರ ಸುಬ್ರರಾಯ ಛತ್ರದಲ್ಲಿ ಪಂಚಮಿ ಪೂಜೆಗೆ ಸಹಕರಿಸಿದ ಗಣ್ಯರನ್ನು ಗೌರವಿಸಲಾಯಿತು. ನಿರ್ವಿಘ್ನವಾಗಿ ನಡೆಯಲು ವಿಘ್ನೇಶ್ವರ, ರಾಮದೇವರ ಪೂಜಿಸಲಾಯಿತು.