ಮಂಡ್ಯದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
- ವಿವಿಧ ಇಲಾಖೆ ಪ್ರಗತಿ ಪರಿಶೀಲನೆ
- ನಗರದಲ್ಲಿ ಜಿಪಂ ಕಚೇರಿ ಮಿನಿ ಸಭಾಂಗಣದಲ್ಲಿ ಸಭೆ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ನಡೆಯುತ್ತಿರುವ ತಾಯಿ ಹಾಲಿನ ಬ್ಯಾಂಕ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿ ಹಾಲಿನ ಬ್ಯಾಂಕ್‌ಗೆ ಸಂಬಂಧಿಸಿದಂತೆ ಪ್ರಸ್ತುತ ಶೇ.40ರಷ್ಟು ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಅದರಂತೆ ಉಳಿದ ಸಿವಿಲ್ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮಾತ್ರವಲ್ಲದೆ ಗುಣಮಟ್ಟದ ಕಾಮಗಾರಿ ಅನುಷ್ಠಾನಗೊಳಿಸಬೇಕು. ಹಾಗೂ ಒಂದು ಬಾರಿ ಕಾಮಗಾರಿ ಪೂರ್ಣಗೊಂಡ ನಂತರ ಪದೇ ಪದೇ ದುರಸ್ತಿ ಮಾಡುವಂತೆ ಇರಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.
ಕಾರ್ಯಪಾಲಕ ಇಂಜಿನಿಯರ್ ಮಾತನಾಡಿ, ಮಿಮ್ಸ್‌ನಲ್ಲಿ ಮಿಡ್-ವೈಫರಿ ಲೆಡ್ ಕೇರ್ ಕೇಂದ್ರವನ್ನು ನಿರ್ಮಾಣ ಮಾಡುವ ಸಂಬಂಧ ಸ್ಥಳ ಅಂತಿಮಗೊಳಿಸಲಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಕಾಮಗಾರಿಗೆ 25 ದಿನಗಳ ಕಾಲಾವಕಾಶ ಅವಶ್ಯಕತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಪ್ರತಿಕ್ರಿತಿಸಿ, ಮಿಮ್ಸ್‌ನ ವೈದ್ಯಕೀಯ ಅಧೀಕ್ಷಕರು ಕಾಮಗಾರಿ ಸಂಬಂಧ ಕಾಲ ಕಾಲಕ್ಕೆ ಪರಿಶೀಲನೆ ಮಾಡಿ ಅದರ ಪ್ರಗತಿಯ ವರದಿಯನ್ನು ಜಿ.ಪಂ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಲಿಂಕ್ ಡಾಕ್ಯೂಮೆಂಟ್‌ನಲ್ಲಿ ಒಟ್ಟು 274 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಪೈಕಿ 161 ಕಾಮಗಾರಿಗಳು ಪೂರ್ಣಗೊಂಡಿದೆ. ಉಳಿದ 88 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಬದಲಾವಣೆ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದವನ್ನು ಪೂರ್ಣಗೊಳಿಸಿ ಮಾ.10ರೊಳಗೆ ವೆಚ್ಚ ಭರಿಸಬೇಕು ಎಂದು ಇಂಜಿನಿಯರ್‌ಗಳಿಗೆ ತಿಳಿಸಿದರು.
ಯಾವುದಾದರೂ ಕಾಮಗಾರಿಗಳಿಗೆ ಹೆಚ್ಚುವರಿ ಕಾಲಾವಕಾಶದ ಅವಶ್ಯಕತೆ ಇದ್ದಲ್ಲಿ, ಲಿಖಿತ ರೂಪದಲ್ಲಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಬಹುಮುಖ್ಯವಾಗಿ ಸದರಿ ಕಾಮಗಾರಿಗಳಿಗೆ ಎಷ್ಟು ಸಮಯಾವಕಾಶದ ಅವಶ್ಯಕತೆ ಎಂಬುದರ ಬಗ್ಗೆಯೂ ನಿಖರವಾಗಿ ತಿಳಿಸಬೇಕು. ಆ ಸಮಯದ ನಂತರ ಯಾವುದೇ ಕಾಲಾವಧಿ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಸರಿಪಡಿಸಲು ತುರ್ತಾಗಿ ಕ್ರಮ ವಹಿಸಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ಕಾಮಗಾರಿಯನ್ನು ಬದಲಾವಣೆ ಮಾಡಲು ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಯಾ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾಡಬೇಕು. ಒಂದು ವೇಳೆ ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೆ ತರಬೇಕು. ಅಂತೆಯೇ ಯಾವುದೇ ಕಾಮಗಾರಿ ಬದಲಾವಣೆಯಾಗಬೇಕಿದ್ದಲ್ಲಿ ಸದರಿ ಕಾಮಗಾರಿಗಳನ್ನು ಆಯಾ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.
ಪ್ರಗತಿ ಪರಿಶೀಲಿಸಿ ವರದಿ ಸಲ್ಲಿಸಬೇಕು: ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿ ಹಾಗೂ ಇಂಜಿನಿಯರ್ ಸಭೆ ಕರೆದು, ಕಾಮಗಾರಿವಾರು ಪರಿಶೀಲನೆ ನಡೆಸಿ ನಂತರ ವರದಿ ಸಲ್ಲಿಸಬೇಕು. ಆ ವರದಿಯ ಆಧಾರದ ಮೇಲೆ ಮಾ.5ರಂದು ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಭಿವೃದ್ಧಿ ಅನುದಾನವನ್ನು ಎಸ್.ಡಿ.ಎಂ.ಸಿ ಗಳಿಗೆ ವರ್ಗಾವಣೆ ಮಾಡಿದಲ್ಲಿ ಆಡಿಟ್ ಆಕ್ಷೇಪಣೆಯಾಗುವ ಸಂಭವವಿರುತ್ತದೆ ಎಂದು ತಾಪಂ ಇಒಗಳು ತಿಳಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಎಲ್ಲ ಶಾಲೆಗಳಿಂದ ತುರ್ತಾಗಿ ಅಗತ್ಯವಿರುವ ಕಾಮಗಾರಿ ಅಥವಾ ಸಾಮಗ್ರಿಗಳ ಮಾಹಿತಿ ಪಡೆದು ವೆಚ್ಚ ಭರಿಸಲು ಸೂಚಿಸಲು ತಿಳಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಶಿವಲಿಂಗಯ್ಯ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಪಿ.ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಎಸ್.ಧನುಷ್, ಯೋಜನಾ ನಿರ್ದೇಶಕ ಸುಂದರ್ ರಾಜ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕ್ರಿಮಿನಲ್ ಮೊಕದ್ದಮೆ ಜತೆಗೆ ಶಿಸ್ತು ಕ್ರಮ
ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮ ಪಾಲನೆ ಮಾಡಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದರು.
ಅದರಂತೆ ಕಾಮಗಾರಿ ಪೂರ್ಣಗೊಳಿಸದೇ ಬಿಲ್ ಪಾವತಿಸುವುದು, ಸಾಮಗ್ರಿ ಸರಬರಾಜು ಆಗದಿದ್ದರೂ ಬಿಲ್ ಪಾವತಿಸುವುದು ಹಾಗೂ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡದೇ ಅನುದಾನ ಪಾವತಿಸಿದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ನಿಯಮಾನುಸಾರ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಯಾವುದೇ ಕಾಮಗಾರಿಗಳನ್ನು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅನುಷ್ಠಾನಗೊಳಿಸಬಾರದು. ಈ ನಿಟ್ಟಿನಲ್ಲಿ ಅವಶ್ಯಕತೆ ಇರುವ ಎಲ್ಲ ಅನುಮೋದನೆಗಳನ್ನು ಪಡೆಯುವ ಸಂಬಂಧ ಮುಖ್ಯ ಯೋಜನಾಧಿಕಾರಿಗಳ ಶಾಖೆಯಲ್ಲಿ ಅನುಸರಣೆ ಮಾಡಿ ಅನುಮೋದನೆ ಪಡೆಯಬೇಕು. ಇಲ್ಲದಿದ್ದಲ್ಲಿ ಅಂತಹ ಇಲಾಖೆಯ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಲಾಗುವುದು ಎಂದು ಸ್ಪಷ್ಟ ಸೂಚನೆ ನೀಡಿದರು.