ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ
- ಸಂಕ್ರಾಂತಿ ಸುಗ್ಗಿ ಸಂಭ್ರಮ
- ಡಾ.ಜೀಶಂಪ ಸಾಹಿತ್ಯ ವೇದಿಕೆ
ಮಂಡ್ಯ: ಮಕರ ಸಂಕ್ರಾಂತಿ ಸುಗ್ಗಿ ಹಬ್ಬ. ಹೊಸ ಬೆಳೆ ಕೊಯ್ಲು, ಸೂರ್ಯನ ಉತ್ತರಾಯಣ ಪ್ರಾರಂಭದ ಸಂಕೇತ. ರೈತರೊಡನೆ ಎಲ್ಲರೂ ಪ್ರಕೃತಿ, ಭೂಮಿ, ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಸಮೃದ್ಧಿಯ ಹಬ್ಬವಾಗಿ ಆಚರಿಸುತ್ತೇವೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಇ.ಸಿ ನಿಂಗರಾಜ್‌ಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಕ್ರಾಂತಿ ಎಂದರೆ ಶ್ರಮ, ಸಂಸ್ಕೃತಿ, ಸಹಭಾಗಿತ್ವದ ಸುಂದರ ಸಂಗಮ. ಈ ಹಬ್ಬದಲ್ಲಿ ಎಳ್ಳು-ಬೆಲ್ಲದ ಸಿಹಿ, ಕಬ್ಬಿನ ಮಧುರತೆ, ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು ಎಂದು ತಿಳಿಸಿದರು.
ಶಾಂತದೂತ ಭಾರತ ದೇಶ ವಿಶ್ವಕ್ಕೆ ಹಲವು ವಿಚಾರದಲ್ಲಿ ಮಾದರಿಯಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಆತಂಕ ಸೃಷ್ಟಿಸಿವೆ. ಬಾಂಗ್ಲಾದೇಶದಲ್ಲಿ ಹಿಂದುಗಳ ಮಾರಣಹೋಮ ಒಂದೆಡೆಯಾದರೆ, ಸ್ವಯಂಘೋಷಿತ ದೊಡ್ಡಣ್ಣ ಎನಿಸಿಕೊಂಡವರು ಒಂದು ದೇಶದ ಅಧ್ಯಕ್ಷರನ್ನೇ ಮಕ್ಕಳನ್ನು ಅಪಹರಿಸಿದಂತೆ ಕಿಡ್ಯ್ನಾಪ್ ಮಾಡುವುದು, ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ನಿಜಕ್ಕೂ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷ ಹಾಗೂ ಇತಿಹಾಸಕಾರ ಡಾ.ಎಚ್.ಶ್ರೀಧರ ಮಾತನಾಡಿ, ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಚಾರಿತ್ರಿಕ ಭಾಷೆಯಾಗಿದೆ. ಕನ್ನಡ ಭಾಷೆಗೆ ಸರ್ವ ಭಾಷೆಗಳ ಜನರನ್ನು ಆಕರ್ಷಿಸುವ, ಸೆಳೆಯುವ ಆಯಸ್ಕಾಂತದಂತ ಶಕ್ತಿ ಇದೆ. ಅದು ಕನ್ನಡದ ಶಕ್ತಿ ಮತ್ತು ತಾಕತ್ತು ಎಂದು ಪ್ರತಿಪಾದಿಸಿದರು.
ಕನ್ನಡಕ್ಕೆ ಕನ್ನಡವೇ ಸಾಕ್ಷಿ. ಕನ್ನಡ ಭಾಷೆ ಕೇವಲ ಹಾಡು ಭಾಷೆಯಾಗಬಾರದು. ಅದು ಹಸಿವಿನ ಭಾಷೆ. ಉಸಿರಿನ ಭಾಷೆ. ಮನಸ್ಸಿನ ಭಾಷೆ. ಹೃದಯದ ಭಾಷೆ ಹಾಗೂ ಬದುಕಿನ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗಟ್ಟಿ ಮನಸು ಮತ್ತು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಸಾಹಿತಿ ಡಾ.ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಪದಾಧಿಕಾರಿಗಳಾದ ರಾಗಿಮುದ್ದನಹಳ್ಳಿ ನಾಗೇಶ್, ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ನೇತ್ರಾ ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕರ್ನಾಟಕ ಸೇವಾ ಭೂಷಣ, ಕನ್ನಡ ರತ್ನ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.