ವೈರಮುಡಿ ಬ್ರಹ್ಮೋತ್ಸವದ ಪೂರ್ವಸಿದ್ಧತೆಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಪರಿಶೀಲಿಸಿದರು. 
ಮಂಡ್ಯ

ವೈರಮುಡಿ ಮಹೋತ್ಸವ ಪೂರ್ವಸಿದ್ಧತೆ ಪರಿಶೀಲನೆ

ಪ್ರಮುಖ ಮುಖ್ಯಾಂಶಗಳು

  • ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣ ಮಹೋತ್ಸವ ಮಾ.28ರಂದು
  • ಜಿಲ್ಲಾಡಳಿತ ಸಕಲ ಸಿದ್ಧತೆ
ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣ ಮಹೋತ್ಸವ ಮಾ.28ರಂದು ರಾತ್ರಿ ನೆರವೇರಲಿದ್ದು, ವೈರಮುಡಿ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ತಿಳಿಸಿದರು.
ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾರ್ಗದರ್ಶನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡುತ್ತಿದೆ. ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕುಮಾರ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿದ್ಧತೆ ಮಾಡಲಾಗುತ್ತಿದ್ದು, ವೈರಮುಡಿ ಉತ್ಸವ ಮಾ.28 ರಂದು ರಾತ್ರಿ 8 ಗಂಟೆಗೆ ಆರಂಭವಾಗಿ ತಡರಾತ್ರಿ 4ರವರೆಗೆ ನಡೆಯಲಿದೆ ಎಂದರು.
ಮಾ.25 ರಂದು ದ್ವಜಾರೋಹಣದೊಂದಿಗೆ ಆರಂಭವಾಗಿ ಏ.4 ರವರೆಗೆ ಉತ್ಸವ ನಡೆಯಲಿದೆ. ಈ ಸಂಬಂಧ ಧಾರ್ಮಿಕ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದೆ. ಇನ್ನು ಭಕ್ತರು ಮೇಲುಕೋಟೆಗೆ ಬರಲು 150ಕ್ಕೂ ಹೆಚ್ಚು ವಿಶೇಷ ಬಸ್ ನಿಯೋಜಿಸಲಾಗಿದೆ. ಭದ್ರತೆಗಾಗಿ 1500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮೇಲುಕೋಟೆಯಲ್ಲಿ ನಿರಂತರ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ತಡೆರಹಿತ ವಿದ್ಯುತ್ ಸೌಕರ್ಯ, ಸುಸಜ್ಜಿತ ವೈದ್ಯಕೀಯ ಸೇವೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಯಸ್ಸಾದ ಭಕ್ತರು ಬಂದು ದರ್ಶನಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೈರಮುಡಿ ಉತ್ಸವದಂದು ಉತ್ಸವ ಬೀದಿಗಳಲ್ಲಿರುವ ತೆರೆದ ಚರಂಡಿಯಲ್ಲಿ ಭಕ್ತರು ಬೀಳದಂತೆ ಚರಂಡಿಯ ಮೇಲ್ಬಾಗ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭಕ್ತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೀಪಾಲಂಕಾರ ಮಾಡುವ ಕಾರ್ಯಗಳು ಭರದಿಂದ ಸಾಗಿದ್ದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಕಾರ್ಯಭಾರವಹಿಸಿ ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಪಾಂಡವಪುರ ತಹಸೀಲ್ದಾರ್ ಬಸವರಾಜ ರೆಡ್ಡಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್ ಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು
ಇಒ ಶೀಲಾಗೆ ತರಾಟೆ: ವೈರಮುಡಿ ಬ್ರಹ್ಮೋತ್ಸವದ ವೇಳೆ ಮೇಲುಕೋಟೆ ಇಒ ಶೀಲಾ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಧಾನಗೊಂಡ ಅಪ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾಡಳಿತದ ಅನುಮತಿಯಿಲ್ಲದೆ ಕಾನೂನು ಸಮ್ಮತವಲ್ಲದ ಕಾರ್ಯಮಾಡಿ ಜಿಲ್ಲಾಡಳಿತಕ್ಕೆ ಮುಜುಗರ ತರುವ ಕಾರ್ಯಮಾಡಬಾರದು ಎಂದ ಪರೋಕ್ಷವಾಗಿ ಆಹ್ವಾನ ಪತ್ರಿಕೆ ಗೊಂದಲದ ಬಗ್ಗೆ ಎಚ್ಚರಿಕೆ ನೀಡಿದರು.
ದೇವಾಲಯದ ಮುಂಭಾಗ ಇರುವ ಉಪಯೋಗಕ್ಕೆ ಬಾರದ ಸೇವಾಕೌಂಟರ್ ತಕ್ಷಣ ತೆಗೆಸಬೇಕು. ಹಳೆಯ ಬ್ಯಾರಿಕೇಡ್ ಬೋರ್ಡ್‌ಗಳನ್ನು ತಕ್ಷಣ ತೆಗೆಸಬೇಕಕು. ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡಿ ಉತ್ಸವದ ವ್ಯವಸ್ಥೆ ಬಗ್ಗೆ ಕಾಳಜಿ ವಹಿಸಬೇಕು. ಜಿಲ್ಲಾಧಿಕಾರಿ ಲಿಖಿತ ಅನುಮತಿಯಲ್ಲದೆ ಯಾವುದೇ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದರು.