ಪೂರ್ವಭಾವಿ ಸಭೆ 
ಮಂಡ್ಯ

ವೈರಮುಡಿ ಬ್ರಹ್ಮೋತ್ಸವ ಪೂರ್ವಭಾವಿ ಸಭೆ ಇಂದು

ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವ ಮಾ.28ರಂದು ನಡೆಯುವ ಸಂಬಂಧ ಮಾ.14 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮೇಲುಕೋಟೆ ದೇವಾಲಯದ ಪರವಾಗಿ ಸ್ಥಾನೀಕರು, ಅರ್ಚಕರು ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸದಸ್ಯರು ಭಾಗವಹಿಸಲಿದ್ದಾರೆ. ಉತ್ಸವ ವೇಳೆ ಕೈಗೊಳ್ಳಬೇಕಾದ ದೀಪಾಲಂಕಾರ, ಪುಷ್ಪಾಲಂಕಾರ, ಪೊಲೀಸ್ ಭದ್ರತೆ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಲಿದೆ.
ಮೂಲ ಸೌಕರ್ಯಕ್ಕೆ ಮುಂದಾಗಲಿ: ವಿಶ್ವವಿಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವ ಸಮೀಪಿಸುತ್ತಿದ್ದು, ಮೂಲಸೌಕರ್ಯ ಒದಗಿಸುವತ್ತ ಜಿಲ್ಲಾಡಳಿತ ಮುಂದಾಗಬೇಕಿದೆ.
ಮಾ.14 ರಂದು ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಉತ್ಸವ ಬೀದಿಗಳಲ್ಲಿರುವ ತೆರೆದ ಚರಂಡಿಗಳನ್ನು ಮುಚ್ಚಿಸುವುದು. ತುಕ್ಕುಹಿಡಿದ ಕಂಬಗಳನ್ನು ತೆಗೆಸುವುದು, ಜಕ್ಕನಹಳ್ಳಿಯಿಂದ ಮೇಲುಕೋಟೆಯವರೆಗಿನ ರಸ್ತೆ ದುರಸ್ಥಿ, ವ್ಯವಸ್ಥಾಪನಾ ಸಮಿತಿಯ ನಿರ್ಣಯದಂತೆ ಜಾತ್ರೆಯ ವೇಳೆ ಕಲ್ಯಾಣಿ ಪೂಜೆಗೆ ನಿಗದಿಪಡಿಸಿದ ಸೇವಾಶುಲ್ಕ ರದ್ದು, ಪಾರದರ್ಶಕ ಟೆಂಡರ್ ಮೂಲಕ ಕರ್ತವ್ಯಗಳ ಹಂಚಿಕೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯಬೇಕಿದೆ.
ವೈರಮುಡಿ ಬ್ರಹ್ಮೋತ್ಸವದ ವೇಳೆ ಕಲ್ಯಾಣಿ, ಬೆಟ್ಟ, ರಾಜಬೀದಿ ಚೆಲುವನಾರಾಯಣಸ್ವಾಮಿ ದೇವಾಲಯದ ಹಾಗೂ ಸ್ಮಾರಕಗಳಿಗೆ ಹೊಸತನದ ನವೀನ ಮಾದರಿಯ ದೀಪಾಲಂಕಾರ, ದೇವಾಲಯದ ಆವರಣಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ರಥೋತ್ಸವ ಮತ್ತು ತೆಪ್ಪೋತ್ಸವಗಳ ಆಚರಣೆಯ ಬಗ್ಗೆಯೂ ಅಂತಿಮ ರೂಪುರೇಷೆ ಸಿದ್ದವಾಗಬೇಕಿದೆ.