ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಸಮೀಪದ ಉತ್ತೂರು ಗ್ರಾಮದಲ್ಲಿ ಬುಧವಾರ ರಾತ್ರಿ ಉತ್ತೂರಮ್ಮ ದೇವಿಯ ಅಗ್ಗಿಷ್ಟಿಕೆ ಬೆಂಕಿಯುಂಡೆ ಇರುವ ಗಡಿಗೆಯನ್ನು ಅರ್ಚಕ ಜಯಕುಮಾರ್ ಬಾಚಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು.
- ಉತ್ತೂರು ಗ್ರಾಮದಲ್ಲಿ ಎಂಟು ದಿನದ ಸಂಭ್ರಮ
ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಸಮೀಪದ ಉತ್ತೂರು ಗ್ರಾಮದಲ್ಲಿ ಎಂಟು ದಿನಗಳಿಂದ ವಿವಿಧ ಸಾಂಪ್ರದಾಯಕ ಪದ್ಧತಿಗಳಿಂದ ಆಚರಿಸಿದ ಉತ್ತೂರಮ್ಮನ ಹಬ್ಬ ಬುಧವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಅಗ್ಗಿಷ್ಟಿಕೆ ಉತ್ಸವ ಜರುಗುವ ಮೂಲಕ ಹಬ್ಬಕ್ಕೆ ತೆರೆ ಬಿದ್ದಿತು.
ಯುಗಾದಿ ಹಬ್ಬವಾದ ಒಂದು ವಾರದ ನಂತರ ಮಾ.31ರಂದು ಗ್ರಾಮದಲ್ಲಿರುವ ದೇವಿಯ ದೇವಸ್ಥಾನಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸುವ ಜತೆಗೆ ಆವರಣದಲ್ಲಿ ಅಗ್ಗಿಷ್ಟಿಕೆ(ಗಡಿಗೆ) ಪ್ರತಿಷ್ಠಾಪಿಸಿ ಲೋಕಕಲ್ಯಾಣಕ್ಕಾಗಿ ಹುಣಸೆ ಮರದ ತುಂಡುಗಳನ್ನು ಹಾಕಿ ಬೆಂಕಿ ಹೊತ್ತಿಸಿ ಪೂಜೆ ಸಲ್ಲಿಸಲಾಗಿದ್ದು, ಎಂಟು ದಿನಗಳ ಕಾಲ ದೇವಿಗೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗಡಿಗೆಯಲ್ಲಿ ಬೆಂಕಿ ಆರದ ರೀತಿಯಲ್ಲಿ ಮರದ ತುಂಡುಗಳನ್ನು ಹಾಕಿಕೊಂಡು ನೋಡಿಕೊಳ್ಳುವ ಮೂಲಕ ಭಕ್ತಿ ಪ್ರಧಾನವಾಗಿ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಲಾಗಿತ್ತು.
ಬುಧವಾರ ಬಿ.ಜಿ.ಪುರ ಗ್ರಾಮದಿಂದ ಪ್ರಧಾನ ಅರ್ಚಕ ಜಯಕುಮಾರ್ ಉತ್ತೂರಮ್ಮ ಖೇಲ್ ಹೊತ್ತು ಕುರುಬನಕಟ್ಟೆ ಲಿಂಗಯ್ಯ-ಚನ್ನಯ್ಯ, ಸಿದ್ದಾಪ್ಪಾಜಿ ಕಂಡಾಯಗಳೊಡನೆ ಮೆರವಣಿಗೆ ಉತ್ಸವದ ಮೂಲಕ ಉತ್ತೂರು ಗ್ರಾಮಕ್ಕೆ ಆಗಮಿಸಿದರು. ಹೊತ್ತುತಂದ ಖೇಲನ್ನು ದೇವಸ್ಥಾನದ ಗದ್ದುಗೆ ಮೇಲಿರಿಸಿ ನಂತರ ಅರ್ಚಕ, ಆವರಣದಲ್ಲಿ ಒಂದು ವಾರ ಗಡಿಗೆಯಲ್ಲಿ(ಅಗ್ಗಿಷ್ಟಿಕೆ) ಹಾಕಿದ್ದ ಬೆಂಕಿ ಉಂಡೆಗಳನ್ನು ಬೊಗಸೆಯಲ್ಲಿ ತೆಗೆದು ಮೈ ಮೇಲೆ ಎರೆಚಿಕೊಂಡು ನಂತದ ಬೆಂಕಿಯುಂಡೆಗಳಿರುವ ಗಡಿಗೆಯನ್ನು ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡು ದೇವಸ್ಥಾನದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕಿ ಹಿಡಲಾಯಿತು. ಈ ವೇಳೆ ನೆರೆದ ಭಕ್ತರು ಉತ್ತೂರಮ್ಮನಿಗೆ ಜಯ ಘೋಷಣೆಗಳನ್ನು ಕೂಗುತ್ತ ಭಕ್ತಿ ಸಮರ್ಪಿಸುವ ಮೂಲಕ ಉತ್ತೂರಮ್ಮನ ಹಬ್ಬಕ್ಕೆ ತೆರೆಬಿದ್ದಿತು.