ಮೇಲುಕೋಟೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನನ್ನೂ ಆರಾಧಿಸಲಾಯಿತು. 
ಮಂಡ್ಯ

ಮೇಲುಕೋಟೆಯಲ್ಲಿ ಉರಿಯಡಿ ಉತ್ಸವ ವೈಭವ

ಮೇಲುಕೋಟೆ: ಕೊನೆಯ ಶ್ರಾವಣ ಶನಿವಾರ ಮೇಲುಕೋಟೆಯಲ್ಲಿ ಭಕ್ತರು ಜಾತ್ರೆಯಂತೆ ನೆರೆದು ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಂಜೆ ಸ್ವಾಮಿಗೆ ಕುದುರೆ ವಾಹನೋತ್ಸವದೊಂದಿಗೆ ಕೃಷ್ಣಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಉರಿಯಡಿ ಉತ್ಸವ ವೈಭವದಿಂದ ನೆರವೇರಿತು.
ಕೃಷ್ಣಜನ್ಮಾಷ್ಟಮಿಯ ವಿಶೇಷಗಳು ಶುಕ್ರವಾರ ತಡರಾತ್ರಿಯವರೆಗೆ ನಡೆದರೂ, ಕೊನೆಯ ಶ್ರಾವಣ ಶನಿವಾರದ ಕಾರಣ ಬೆಳಗಿನ 5 ಗಂಟೆಗೆ ದೇವಾಲಯವನ್ನು ತೆರೆದು ನಿತ್ಯ ಪೂಜಾಕೈಂಕರ್ಯಗಳನ್ನು ಮುಕ್ತಾಯಮಾಡಿ, ಬೆಳಗ್ಗೆ 8ಗಂಟೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. 50ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿ ದರ್ಶನ ಪಡೆದು ಪುನೀತರಾದರು.
ದೇವರ ಒಕ್ಕಲಿನ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರಿಗೆ ಮುಡಿಹರಕೆ ಸಮರ್ಪಿಸಿ, ನಾಮಧರಸಿ ದರ್ಶನಕ್ಕೆ ಆಗಮಿಸುತ್ತಿದ್ದ ದೃಶ್ಯ ಇಡೀ ದಿನ ಕಂಡು ಬಂತು. ದೇವರ ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ಶ್ರಾವಣ ಮಾಸದ ವಿಶೇಷ ತಿನಿಸುಗಳನ್ನು ಖರೀದಿಸಿದ ಭಕ್ತರು ಮನೆಮಂದಿಯೊಂದಿಗೆ ಮನೆದೇವರ ಸನ್ನಿಧಿಯಲ್ಲಿ ಶ್ರಾವಣ ಸಂಭ್ರಮದ ಸವಿ ಅನುಭವಿಸಿದರು.
ವಾಹನಗಳು ದೇವಾಲಯದ ಬಳಿ ಬರುವುದನ್ನು ನಿಷೇಧಿಸಿ, ಪಟ್ಟಣದ ಹೊರ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿತ್ತು. ಕಳೆದ ವರ್ಷದಂತೆ ಈ ಸಲವೂ ಭಕ್ತರು ಅನ್ನದಾನ ನೆರವೇರಿಸಿದರು. ಪಾರ್ವಟೆ ಆಂಜನೇಯಸ್ವಾಮಿಗೆ ಕೊನೆ ಶ್ರಾವಣಮಾಸದ ಪ್ರಯುಕ್ತ ಕೊಳಲು ಕೃಷ್ಣನ ಅಲಂಕಾರ ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪರಿಚಾರಕ ಪಾರುಪತ್ತೇಗಾರ್ ಎಂ.ಎನ್.ಪಾರ್ಥಸಾರಥಿ ಧಾರ್ಮಿಕ ಕೈಂಕರ್ಯಗಳ ವ್ಯವಸ್ಥೆ ಮಾಡಿದ್ದರು.
ಚೆಲುವನಾರಾಯಣಸ್ವಾಮಿಯನ್ನು ಶ್ರೀಕೃಷ್ಣ-ಬಲರಾಮರು ಆರಾಧಿಸಿದ ಪ್ರತೀಕವಿದ್ದು, ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕೃಷ್ಣಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ನೆರವೇರಿತು. ರಾತ್ರಿ ದೇವಾಲಯದಲ್ಲಿರುವ ಶ್ರೀಕೃಷ್ಣನಿಗೆ ಅಭಿಷೇಕ ಅಲಂಕಾರ ನೆರವೇರಿಸಿ ಪಲ್ಲವಸ್ತ್ರದ ತೋರಣಗಳನ್ನು ಮಾಡಲಾಗಿತ್ತು. ಚಕ್ಕುಲಿ, ಮುಸ್ಸೂರೆ ತೇಂಗೊಳಲು ಮುಂತಾದ 30ಕ್ಕೂ ಹೆಚ್ಚು ಬಗೆಯ ವಿಶೇಷ ತಿನಿಸುಗಳನ್ನು ಕೃಷ್ಣ-ಚೆಲುವನಾರಾಯಣಸ್ವಾಮಿಗೆ ನೈವೇಧ್ಯಮಾಡಿ ಭಕ್ತರಿಗೆ ವಿತರಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಸಂಜೆ ಕೃಷ್ಣನಿಗೆ ಪಲ್ಲಕ್ಕಿ ಉತ್ಸವ, ಚೆಲುವನಾರಾಯಣಸ್ವಾಮಿಗೆ ಕುದುರೆ ವಾಹನೋತ್ಸವ, ಬಂಡಿಕಾರರಿಂದ ಉರಿಯಡಿ ಉತ್ಸವ ಆಚರಣೆಗಳು ನಡೆದವು.