ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಮದ್ದೂರು ಉತ್ಸವ ಸಂಬಂಧ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಂ.ಉದಯ್ ಚರ್ಚಿಸಿದರು. ಚಲುವರಾಜು, ಸಿ.ಎನ್.ಧನಂಜಯ, ಅರುಣ್‌ಕುಮಾರ್, ನವೀನ್‌ಕುಮಾರ್, ನಾರಾಯಣಿ ಇದ್ದರು.
ಮದ್ದೂರು: ನಗರದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಮದ್ದೂರು ಉತ್ಸವಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮದ್ದೂರು ಉತ್ಸವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.
ಮದ್ದೂರು ಉತ್ಸವದ ಪ್ರಾರಂಭೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಮ್ಯಾರಥಾನ್ ನಿರೀಕ್ಷೆಗೂ ಮೀರಿ ಜನರು ಬಂದಿದ್ದು ಹಾಗೂ ಮದ್ದೂರಮ್ಮನ ಜಾತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ದೇಸಿ ತಳಿ ಹಳ್ಳಿಕಾರ್ ದನಗಳು, ಬಂಡೂರು ಟಗರುಗಳು, ಕುದುರೆಗಳನ್ನು ರೈತರು ತಂದು ಕಟ್ಟಿರುವುದರಿಂದ ಜಾತ್ರೆಗೆ ಹೆಚ್ಚಿನ ಮೆರುಗು ಬಂದಿದೆ ಎಂದರು.
ಮಂಗಳವಾರ ಮದ್ದೂರು ಉತ್ಸವದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ಮೇ 8ರವರೆಗೂ ದೀಪಾಲಂಕಾರವಿದ್ದು ಇದರಿಂದ ಮದ್ದೂರಮ್ಮನ ಹಬ್ಬಕ್ಕೆ ವಿಶೇಷ ಮೆರುಗು ಬರಲಿದೆ ಎಂದರು.
ಮಂಗಳವಾರ ಮತ್ತು ಬುಧವಾರ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದ್ದು, ನಗರದ ತಾಲೂಕು ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ವಿಜೇತ ತಂಡಗಳಿಗೆ ಕ್ರಮವಾಗಿ 50 ಸಾವಿರ ರೂ., 25 ಸಾವಿರ ರೂ., 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಜತೆಗೆ 10 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು. ಜತೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಬಿಇಒ ಸಿ.ಎನ್.ಧನಂಜಯ, ಸಿಡಿಪಿಓ ಅರುಣ್‌ಕುಮಾರ್, ಸಿಪಿಐಗಳಾದ ನವೀನ್‌ಕುಮಾರ್, ನಾರಾಯಣಿ ಇದ್ದರು.