ಪಾಂಡವಪುರ ತಾಲೂಕಿನ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಅವರನ್ನು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೇರಿದಂತೆ ಎಲ್ಲಾ ನಿರ್ದೇಶಕರು, ಮುಖಂಡರು, ಯಜಮಾನರು ಅಭಿನಂಧಿಸಿದರು.
ಪಾಂಡವಪುರ: ತಾಲೂಕಿನ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಹಿಂದಿನ ಅಧ್ಯಕ್ಷ ಡಿ.ಇ.ಕಲಿಗಣೇಶ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಅವರು ನಾಮಪತ್ರ ಸಲ್ಲಿಸಿದರು. ಇವರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಮಹೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ಡೇರಿ ಕಾರ್ಯದರ್ಶಿ ಡಿ.ಎಂ.ಶಿವಪ್ಪ ಘೋಷಿಸಿದರು.
ಡೇರಿ ಅಧ್ಯಕ್ಷರಾಗಿ ಮಹೇಶ್ ಆಯ್ಕೆಯಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಿಹಿ ಹಂಚಿ ಬೆಂಬಲಿಗರು ಸಂಭ್ರಮಿಸಿದರು. ನೂತನ ಅಧ್ಯಕ್ಷ ಮಹೇಶ್ ಅವರನ್ನು ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಡೇರಿದಂತೆ ಡೇರಿ ಉಪಾಧ್ಯಕ್ಷೆ, ನಿರ್ದೇಶಕರು, ಮುಖಂಡರು ಅಭಿನಂದಿಸಿದರು.
ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ತಾಲೂಕಿನ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘವು ತಾಲೂಕು ಹಾಗೂ ಜಿಲ್ಲೆಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿಯೇ ಅಧಿಕ ಹಾಲು ಉತ್ಪಾದನೆ ಮಾಡುವ ಸಂಘವಾಗಿದ್ದು, ಗ್ರಾಮಸ್ಥತೊಬ್ಬರು ಅಧಿಕ ಹಾಲು ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿಯೇ ಅಧಿಕ ಹಾಲು ಉತ್ಪಾದನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿ ಪ್ರಶಸ್ತಿ ಪಡೆದಿದ್ದಾರೆ ಎಂದರು.
ಅಧ್ಯಕ್ಷ ಮಹೇಶ್ ಮಾತನಾಡಿ, ಡಿಂಕಾ ಡೇರಿಗೆ ನೂತನ ಅಧ್ಯಕ್ಷರಾಗಿ ನನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಡೇರಿ ನಿರ್ದೇಶಕರು, ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆಗೆಗೂಡಿ ಮಾದರಿಯಾಗಿ ಕೆಲಸ ಮಾಡುವ ಮೂಲಕ ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು ಭರವಸೆ ನೀಡಿದರು.
ಉಪಾಧ್ಯಕ್ಷೆ ಸೌಮ್ಯಾ, ಮಾಜಿ ಅಧ್ಯಕ್ಷರಾದ ಡಿ.ಇ.ಕಲಿಗಣೇಶ್, ಜೆಸಿಬಿ ಗಿರೀಶ್, ಡಿ.ವಿ.ಶಿವಣ್ಣ, ನಿರ್ದೇಶಕರಾದ ಮಹದೇವಪ್ಪ, ಡಿ.ಎಂ.ಇಂದ್ರೇಶ್, ಶಿವಲಿಂಗಪ್ಪ, ಪ್ರೇಮಾ, ಕೃಷ್ಣಶೆಟ್ಟಿ, ಡಿ.ಎಂ.ಪುಟ್ಟೇಗೌಡ, ಡಿ.ಬಿ.ಶ್ರೀನಿವಾಸಯ್ಯ ರಮಾದೇವಿ, ಕಾರ್ಯದರ್ಶಿ ಡಿ.ಎಂ.ಶಿವಪ್ಪ, ಹಾಲು ಪರೀಕ್ಷಕ ಜೆ.ಕೇಶವಚಾರಿ, ಸಹಾಯಕರಾದ ಡಿ.ಎಸ್.ಈರಪ್ಪಾಜಿ, ಡಿ.ಎಸ್.ಶೇಖರಪ್ಪ, ಮಾದಯ್ಯ ಸೇರಿದಂತೆ ಗ್ರಾಮದ ಗ್ರಾಪಂ ಸದಸ್ಯರು, ಮುಖಂಡರು, ಯಜಮಾನರು ಗ್ರಾಮಸ್ಥರು ಹಾಜರಿದ್ದರು.