ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ 
ಮಂಡ್ಯ

ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಬೆಳೆಯಿರಿ: ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ

ಕೆ.ಎನ್.ರಾಘವೇಂದ್ರ
ಮಂಡ್ಯ: ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಬೆಳೆಗಳನ್ನು ಬೆಳೆ ಬೆಳೆಯಬೇಕೆಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪ್ರಸ್ತುತ ವರ್ಷ ಕಡಿಮೆ ಮಳೆಯಾಗಿದೆ. ಕೃಷಿ ಇಲಾಖೆ ಅಂಕಿ ಅಂಶದ ಪ್ರಕಾರ 2026ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,06,835 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಬೇಕಾದ ಗುರಿ ಹೊಂದಲಾಗಿತ್ತು. ಆದರೆ ಮಳೆಯ ಕೊರತೆಯಿಂದಾಗಿ ಜು.16 ರವರೆಗೆ 18,965 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕೆಲ ಪ್ರದೇಶದಲ್ಲಿ ಆರಂಭಿಕ ಮಳೆಯ ನಂತರ ತೇವಾಂಶದ ಕೊರತೆಯಿಂದ ಮೊಳಕೆ ಸಮರ್ಪಕವಾಗಿ ಬಂದಿಲ್ಲ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೆಲವು ರೈತರು ಇನ್ನೂ ಬಿತ್ತನೆ ಕಾರ್ಯವನ್ನು ಆರಂಭಿಸಿಲ್ಲ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ವಿವಿಯಲ್ಲಿ ಪರ್ಯಾಯ ಬೆಳೆ ಯೋಜನೆ ಕುರಿತ ಪ್ರಾದೇಶಿಕ ಸಮಾಲೋಚನಾ ಸಭೆ ಆಯೋಜಿಸಲಾಯಿತು. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಕೃಷಿ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶನಾಲಯದ ವಿಜ್ಞಾನಿಗಳು ಮತ್ತು ವಿವಿಧ ವಿಷಯ ತಜ್ಞರು ಭಾಗವಹಿಸಿ ಪ್ರಸ್ತುತ ಮುಂಗಾರು ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಆಯ್ಕೆ, ತೇವಾಂಶ ಸಂರಕ್ಷಣೆ, ನೀರಿನ ಸಮರ್ಪಕ ಬಳಕೆ, ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ-ರೋಗ ನಿರ್ವಹಣೆ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ರೈತರಿಗೆ ಕೆಲ ಪ್ರಮುಖ ಶಿಫಾರಸು ಮಾಡಲಾಗಿದೆ. ಅದರಂತೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ರಾಗಿಯಲ್ಲಿ ಮಧ್ಯಮ, ಅಲ್ಪಾವಧಿ ತಳಿ ಹಾಗೂ ಬರ ನಿರೋಧಕ ತಳಿಗಳನ್ನು ಬಿತ್ತನೆ ಮಾಡುವುದು ಸೂಕ್ತ. ರಾಗಿಯ ಮಧ್ಯಮಾವಧಿ ತಳಿ, ಸಿರಿಧಾನ್ಯಗಳಾದ ನವಣೆ, ಹಾರಕ, ಸಾಮೆ, ಬರಗು ಮತ್ತು ಊದಲು ಬೆಳೆ ಹಾಕಬಹುದು. ಅಂತೆಯೇ ರಾಗಿ ಜತೆಗೆ ಅವರೆ, ರಾಗಿ ಜತೆಗೆ ತೊಗರಿ, ಮುಸುಕಿನ ಜೋಳ ಜತೆ ತೊಗರಿ, ಮುಸುಕಿನ ಜೋಳ ಜತೆ ಅವರೆ, ನವಣೆ ಜತೆ ತೊಗರಿ, ನವಣೆ ಜತೆ ಹುರುಳಿ, ಸಾಮೆ ಜತೆ ತೊಗರಿ ಹಾಗೂ ಹಾರಕ ಜತೆ ತೊಗರಿ ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸಬಹುದು ಎಂದು ವಿವರಿಸಿದ್ದಾರೆ.
ಇನ್ನು ಭತ್ತದಲ್ಲಿ ಏರೋಬಿಕ್, ಶ್ರೀ ಪದ್ಧತಿ ಹಾಗೂ ನೇರ ಬಿತ್ತನೆ ವಿಧಾನಗಳಲ್ಲಿ ನೀರಿನ ಲಭ್ಯತೆಗನುಗುಣವಾಗಿ ಭತ್ತ ಬೆಳೆಯುವುದು ಸೂಕ್ತ. ಹೈನುಗಾರಿಕೆಯಲ್ಲಿ ಸೂಕ್ತ ಮೇವಿನ ತಳಿ ಬೆಳೆದು ಮೇವಿನ ಕೊರತೆಯನ್ನು ನೀಗಿಸಬಹುದಾಗಿದೆ. ನಾಲಾ ನೀರಿನ ಜತೆಗೆ ಕೊಳವೆ ಬಾವಿ ಆಶ್ರಿತ ನೀರಾವರಿ ಪ್ರದೇಶದಲ್ಲಿ ಕಬ್ಬು ಬೆಳೆಯಲ್ಲಿ ಕೆಲ ತಳಿ ಬೆಳೆಯಬಹುದು. ದೀರ್ಘಾವಧಿ ತೋಟಗಾರಿಕೆ ಬೆಳೆಗಳಲ್ಲಿ ಅಚ್ಚಾದನೆ, ಬೆಳೆಗಳ ಬುಡಕ್ಕೆ ಒಣಹುಲ್ಲು ಅಥವಾ ತೆಂಗಿನ ಸಿಪ್ಪೆ ಹೊದಿಕೆ ಹಾಕಿ ತೇವಾಂಶ ಕಾಪಾಡಬಹುದಾಗಿದೆ. ರೈತರು ಸ್ಥಳೀಯ ಹವಾಮಾನ, ಮಳೆಯ ಸ್ಥಿತಿ, ನೀರಿನ ಲಭ್ಯತೆ ಹಾಗೂ ತಜ್ಞರ ಸಲಹೆಗಳನ್ನು ಆಧರಿಸಿ ಬೆಳೆ ಆಯ್ಕೆ ಮಾಡುವುದು, ತೇವಾಂಶ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು, ಸಮತೋಲನ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಪ್ರಸಕ್ತ ಮುಂಗಾರು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.