ಮಳವಳ್ಳಿ ಪಟ್ಟಣದ ಸಿದ್ದಾರ್ಥ ಬಡಾವಣೆಯಲ್ಲಿ ಶುಕ್ರವಾರ ನಡೆದ ಭಾವೈಕ್ಯತ ಮೆರವಣಿಗೆಯಲ್ಲಿ ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗೆ ಬಡಾವಣೆ ನಿವಾಸಿಗಳು ಗೌರವ ಸಲ್ಲಿಸಿದರು.
- ಮೆರವಣಿಗೆಯಲ್ಲಿ ನೂರಾರು ಭಕ್ತರು ಭಾಗಿ
- ಗಮನ ಸೆಳೆದ ವಸ್ತುಪ್ರದರ್ಶನ
ಮಳವಳ್ಳಿ: ಪಟ್ಟಣದಲ್ಲಿ ನಡೆಯುವ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಐದನೇ ದಿನವಾದ ಶುಕ್ರವಾರ ಸಿದ್ಧಾರ್ಥನಗರದ ಬದನಾಳೇಶ್ವರ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಭಾವೈಕ್ಯತಾ ಮೆರವಣಿಗೆಗೆ ಚಾಲನೆ ದೊರೆಯಿತು.
ಬೆಳಗ್ಗೆ 7 ಗಂಟೆಗೆ ಪಟ್ಟಣದ ಸಿದ್ಧಾರ್ಥನಗರದ ಬದನಾಳೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಕನಕಪುರ ಶ್ರೀ ಚನ್ನಬಸವಸ್ವಾಮೀಜಿ ಸಮ್ಮುಖದಲ್ಲಿ ತೋಟಹಳ್ಳಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಗುತ್ತಲು ತೆಂಡೇಕೆರೆ ಜಂಗಮ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಸುತ್ತೂರು ಶ್ರೀಗಳು ಆಶೀರ್ವಚನ ನೀಡಿದರು.
ನಂತರ ಶಿವರಾತ್ರೀಶ್ವರ ಉತ್ಸವ ಮೂರ್ತಿ ಮೆರವಣಿಗೆ ಮಂಗಳವಾದ್ಯದೊಡನೆ ಪೂಜಾ ಕುಣಿತ ಮತ್ತು ವಿವಿಧ ಜನಪದ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳು, ಸೇವಕರೊಂದಿಗೆ ಭಾವೈಕ್ಯತಾ ಯಾತ್ರೆ ನಡೆಸಲಾಯಿತು. ಶ್ರೀ
ವೇದಿಕೆ ಬಳಿ ತೆರೆಯಲಾಗಿರುವ 130ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು. ತಾಲೂಕಿನ ಕೃಷಿಕರನ್ನು ಸಾವಯವ ಕೃಷಿಯತ್ತ ಬದಲಾಯಿಸಬೇಕೆಂಬ ಹಂಬಲದಿಂದ ಮಳವಳ್ಳಿ ತಾಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘ ರೈತರ ಮನಪರಿವರ್ತನೆ ಮುಂದಾಗಿದೆ. ಸಿರಿಧಾನ್ಯ, ಗಾಣದಿಂದ ತಯಾರಿದ ವಿವಿಧ ಎಣ್ಣೆ ಹಾಗೂ ರೈತರು ಉತ್ಪಾದಿಸಿದ ಹಲವು ಉತ್ಪನ್ನಗಳನ್ನು ಇಡಲಾಗಿತ್ತು. ಮಳಿಗೆಗೆ ಸುತ್ತೂರು ಶ್ರೀಗಳು ಭೇಟಿ ನೀಡಿ ರೈತರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಜಯಂತಿ ಮಹೋತ್ಸವದಲ್ಲಿ ರಂಗಭೂಮಿ ಕಲಾಭಿಮಾನಿಗಳ ಮನ ತಣಿಸಲು ಪೌರಾಣಿಕ ನಾಟಕಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಗೌಡಗೆರೆ ಗ್ರಾಮದ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಲಿ ತಂಡದಿಂದ ದಕ್ಷಯಜ್ಞ, ಮಳವಳ್ಳಿ ಮಲೆ ಮಹದೇಶ್ವರ ಕಲಾ ಸಂಘದಿಂದ ಕುರುಕ್ಷೇತ್ರ ನಾಟಕ ಪ್ರದರ್ಶನಗೊಂಡಿತು.
ಡಿ.20 ರಂದು ಸಂಜೆ 6 ಗಂಟೆ ಕೊಪ್ಪಳ ಗವಿ ಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಬೆಂಗಳೂರು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಪಿ.ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಮಾಜಿ ಶಾಸಕಿಯರಾದ ನಾಗಮಣಿ ನಾಗೇಗೌಡ, ಮಲ್ಲಾಜಮ್ಮ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ ಪಾಲ್ಗೊಳ್ಳುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.20 ರಂದು ಸಂಜೆ 4 ಗಂಟೆಗೆ ಯಶವಂತ್ ಹೊಸಟ್ಟಿ ತಂಡದಿಂದ ಭಕ್ತಿ ಸಂಗೀತ, ಹಿನ್ನೆಲೆ ಗಾಯಕ ಹೇಮಂತ್, ಕಲಾವತಿ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ. ರಾತ್ರಿ 11 ಗಂಟೆಗೆ ಮೈಸೂರಿನ ಶಿವರಾತ್ರಿ ರಾಜೇಂದ್ರ ಕಲಾ ಬಳಗದಿಂದ ಪ್ರಭುಲಿಂಗಲೀಲೆ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.