ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿಯನ್ನು ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು.
- ನಗರದಲ್ಲಿ ಯುಗಾದಿ ಕವಿಗೋಷ್ಠಿ
- ಕೆಟಿಎಚ್ ಕನ್ನಡ ಬಳಗ, ನಂಜಮ್ಮ ಮೋಟೇಗೌಡ ಚಾರಿಟಬಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ನಿಂದ ಆಯೋಜನೆ
ಮಂಡ್ಯ: ಮನರಂಜನೆಗಾಗಿ ಏನೆನೋ ಬರೆದರೆ ಜನರು ಒಪ್ಪುವುದಿಲ್ಲ. ಏಕೆಂದರೆ ಎಲ್ಲರೂ ಬುದ್ಧಿವಂತರಾಗಿದ್ದಾರೆ. ವ್ಯಾಪಾರಿ ಸೂತ್ರದಲ್ಲಿ ಹಾಗೂ ಜನರಿಗೆ ಏನು ಬರೆದರೆ ತಲುಪಬಹುದು ಎಂಬುವ ನಿಟ್ಟಿನಲ್ಲಿ ಸಾಹಿತ್ಯ ಹೇಗೆ ಏನನ್ನೂ ಕೊಡಬೇಕು ಎನ್ನುವುದನ್ನು ಕವಿಯಾದವರು ನೋಡಬೇಕು ಎಂದು ಕವಯಿತ್ರಿ ಎಚ್.ಎಲ್.ಪುಷ್ಪಾ ಸಲಹೆ ನೀಡಿದರು.
ನಗರದ ಗಾಂಧಿಭವನದಲ್ಲಿ ಕೆಟಿಎಚ್ ಕನ್ನಡ ಬಳಗ, ನಂಜಮ್ಮ ಮೋಟೇಗೌಡ ಚಾರಿಟಬಲ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಕೊಪ್ಪ ಸಹಯೋಗದಲ್ಲಿ ವಿಶ್ವ ಕವಿಗಳ ದಿನದ ಅಂಗವಾಗಿ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ನಾಡಿನ ಮಣ್ಣು, ಹೆಣ್ಣು ಹಾಗೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಾರೋ ಅವರು ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗುತ್ತಾನೆ ಎನ್ನುವುದಕ್ಕೆ ಪ್ರಸ್ತುತದಲ್ಲಿರುವ ಸೆರಗು ಸೆರ್ಸೆ ಎಂಬ ಸಿನಿಮಾ ಹಾಡನ್ನು ವಿರೋಧಿಸಿರುವುದೇ ಸಾಕ್ಷಿ ಎಂದು ಹೇಳಿದರು.
ಕವಿತೆ ಎನ್ನುವುದು ನಿರಂತರವಾಗಿ ಬರೆಯುವ ಪ್ರಕ್ರಿಯೆಯಾಗಿದೆ. ಎಲ್ಲ ಕವಿತೆಗಳು ಗೆಲುವು ತಂದುಕೊಡುವುದಿಲ್ಲ. ನಿರಾಶೆಯನ್ನೂ ನೀಡಬಹುದು ಅಥವಾ ಸಫಲತೆಯನ್ನೂ ಕೊಡಬಹುದು. ಕವಿ ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ತಿಳಿಸಬೇಕು. ಅಂದುಕೊಂಡದನ್ನು ಬರೆಯದೇ, ಹೇಳುವುದನ್ನು ಹೇಳಕ್ಕಾಗದೇ ಇರಬಾರದು. ವಸ್ತು ತೆಗೆದುಕೊಂಡು ಬರೆಯುವುದು ಮುಖ್ಯವಲ್ಲ, ಅದನ್ನು ಹೇಗೆ ಬರೆಯುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಉದಾಹರಣೆಗೆ ದ.ರಾ.ಬೇಂದ್ರೆ, ಕುವೆಂಪು, ದಲಿತ ಕವಿ ಸಿದ್ದಲಿಂಗಯ್ಯ ಸೇರಿದಂತೆ ಹಲವರ ಕವಿತೆಯನ್ನು ಓದಿದರೆ ತಿಳಿಯುತ್ತದೆ ಎಂದರು.
ದಲಿತ ಕಾವ್ಯ, ಬಂಡಾಯ ಕಾವ್ಯ, ಮಹಿಳಾ ಕಾವ್ಯ ಎಂದು ಏಕೆ ಕರೆಯುತ್ತೇವೆ ಎನ್ನುವುದನ್ನು ನೋಡಬೇಕು. ಆಯಾ ವರ್ಗದ ವಿಚಾರಗಳನ್ನು ಅವುಗಳು ಪ್ರತಿನಿಧಿಸುತ್ತಿರುತ್ತವೆ. ನಿರಂತರ ಶೋಷಣೆಯಿಂದ, ದೌರ್ಜನ್ಯಕ್ಕೊಳಗಾದವರು ತಮ್ಮ ಕವಿತೆಗಳ ಮೂಲಕ ಹೇಳುತ್ತಾ ಹೋಗುತ್ತಾರೆ ಅಥವಾ ನೋಡಿ ಬರೆಯುತ್ತಾರೆ. ಇದರಲ್ಲಿ ಉಲ್ಲಾಸ ಮತ್ತು ಸಂತೋಷವನ್ನು ಬರೆಯುವುದಕ್ಕೆ ಆಗುವುದಿಲ್ಲ, ಹಾಗಾಗಿ ಕವಿತೆ ಹೀಗೆ ಇರುತ್ತದೆ ಎನ್ನುವುದನ್ನು ಹೇಳುವುದಕ್ಕೂ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, ಮಂಡ್ಯದವನೆಂದು ಹೇಳಲು ನನಗೆ ಹೆಮ್ಮೆ ಇದೆ. ರಂಗಭೂಮಿ, ಜಾನಪದ, ರೈತ ಚಳವಳಿ, ಕಾವೇರಿ ನೆಲ ಎಲ್ಲವೂ ನಮ್ಮ ಮಂಡ್ಯ ಜಿಲ್ಲೆಯಲ್ಲಿದೆ. ನಾನು ಬರೆಯುವ ಹಾಡಿನಲ್ಲಿ ಮಂಡ್ಯ ಕೃಷಿ ಹಾಗೂ ಮಣ್ಣಿನ ಗುಣ ಇರುತ್ತದೆ ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಯುವ ಕವಿಗಳು ಹಾಗೂ ಸಾಹಿತಿಗಳು ಸಾಹಿತ್ಯ ಹಾಗೂ ಕಾವ್ಯವನ್ನು ಹೆಚ್ಚು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದು ಸಾಹಿತ್ಯ, ಕವಿ ಕೃಷಿಯಾಗಿದೆ. ನೀವು ಕೃಷಿ ಮಾಡಿದರೆ ಅಷ್ಟೇ ಸಾಹಿತ್ಯ ಕಸಿ ಮಾಡಲು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕಾವ್ಯ ರಚನೆಯು ಜಾನಪದ ಶೈಲಿಯಲ್ಲಿ ಹಾಗೂ ಜನರಿಗೆ ಅರ್ಥವಾಗುವ ಪದಗಳನ್ನು ಬರೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕನ್ನಡ ಬಳಗದ ಕೆ.ಟಿ.ಹನುಮಂತು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಟಿ.ವೀರಪ್ಪ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಸಾಹಿತಿ ಡಾ.ಹುಸ್ಕೂರು ಕೃಷ್ಣೇಗೌಡ, ಪ್ರತಿಭಾಂಜಲಿ ಡೇವಿಡ್, ಚಿಂತಕ ಧನಂಜಯ ದರಸಗುಪ್ಪೆ ಇತರರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯು ಗಮನ ಸೆಳೆಯಿತು. ನಂತರ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಮಾಡಿದರು.