Two gold chains stolen 
ಮಂಡ್ಯ

ಒಂದೇ ದಿನ ಇಬ್ಬರ ಚಿನ್ನದ ಸರ ಕಳ್ಳತನ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಬಸ್ ನಿಲ್ದಾಣದಲ್ಲಿ ಘಟನೆ
ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಂಗಳವಾರ ಇಬ್ಬರು ಮಹಿಳಾ ಪ್ರಯಾಣಿಕರ ಚಿನ್ನದ ಸರ ಕಳ್ಳತನ ಮಾಡಲಾಗಿದೆ.
ಕೊಳ್ಳೇಗಾಲ ತಾಲೂಕಿನ ಉಗನಿಯ ಗ್ರಾಮದ ಸುಂದ್ರಮ್ಮ ಹಾಗೂ ತಿ.ನರಸೀಪುರ ತಾಲೂಕಿನ ಸೇನಾಪತಿಹಳ್ಳಿ ಗ್ರಾಮದ ಜಯಮ್ಮ ಅವರ ಚಿನ್ನದ ಸರ ಕಳ್ಳತನವಾಗಿದೆ.
ಸುಂದ್ರಮ್ಮ ಎಂಬುವರು ಪಟ್ಟಣದ ಹೊರವಲಯದಲ್ಲಿರುವ ಬೀರೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳಲು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಪ್ರಯಾಣಿಕರ ನೂಕು ನುಗ್ಗಲಿನಲ್ಲಿ ಕಳ್ಳರು 40 ಗ್ರಾಂ ಮಾಂಗಲ್ಯ ಸರವನ್ನು ಕಳವು ಮಾಡಿದ್ದಾರೆ.
ಅದೇ ರೀತಿ ಜಯಮ್ಮ ಎಂಬುವರು ಬನ್ನೂರು ಮಾರ್ಗವಾಗಿ ಪಟ್ಟಣಕ್ಕೆ ಬಂದು ಮಲೆ ಮಹದೇಶ್ವರ ಬೆಟ್ಟಕೆ ತೆರಳಲು ಬಸ್ ಹತ್ತುವ ವೇಳೆ ಸುಮಾರು 25 ಗ್ರಾಂ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಒಂದೇ ದಿನ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಚಿನ್ನದ ಸರ ಕಳ್ಳತನವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಈ ಸಂಬಂಧ ಎರಡೂ ಪ್ರಕರಣಗಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.