ಬೈಕ್ ಗೆ ಕಾರು ಡಿಕ್ಕಿಯಾಗಿರುವುದು. 
ಮಂಡ್ಯ

ಕಾರು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರ ಸಾವು

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಮತ್ತೊಬ್ಬನ ಸ್ಥಿತಿ ಚಿಂತಾಜನಕ
  • ಮಳವಳ್ಳಿ ದೊಡ್ಡಕೆರೆ ಬಳಿ ಅಪಘಾತ
ಮಳವಳ್ಳಿ: ಪಟ್ಟಣದ ಹೊರವಲಯದ ಮದ್ದೂರು ಮುಖ್ಯರಸ್ತೆಯ ದೊಡ್ಡಕೆರೆ ಬಳಿ ಬುಧವಾರ ತಡರಾತ್ರಿ ಕಾರು ಡಿಕ್ಕಿಯಾಗಿ ಒಂದೇ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ತಮಡೆ ಕಲಾವಿದರಾದ ತಾಲೂಕಿನ ಧನಗೂರು ಗ್ರಾಮದ ಪ್ರಸನ್ನ(28), ಕನಕಪುರ ತಾಲೂಕು ಸಾತನೂರು ಹೋಬಳಿ ಕಂಚನಹಳ್ಳಿ ಬಸವೇಗೌಡ(27) ಮೃತರು. ಡಿ.ಕೆ.ಹಳ್ಳಿಯ ನಿಶಾಂತ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಮೂವರು ತಮಟೆ ಕಲಾವಿದರಾಗಿದ್ದು, ಕಾರ್ಯಕ್ರಮ ಮುಗಿಸಿಕೊಂಡು ಕೆ.ಎಂ.ದೊಡ್ಡಿ ಕಡೆಯಿಂದ ಒಂದೇ ಬೈಕ್‌ನಲ್ಲಿ ಬರುತ್ತಿದ್ದಾಗ ಮಳವಳ್ಳಿ ಕಡೆಯಿಂದ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಮೂವರಿಗೂ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಂಬುಲೆನ್ಸ್ ಮೂಲಕ ಎಲ್ಲರನ್ನೂ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆ ರವಾನಿಸಿದರು.
ಬಸವೇಗೌಡ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಪ್ರಸನ್ನನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗಿನ ಜಾವ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ನಿಶಾಂತ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದಲ್ಲಿ ಎರಡು ವಾಹನಗಳು ನಜ್ಜುಗುಜ್ಜಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.