ಪಾಂಡವಪುರ ಪಟ್ಟಣದಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಪಾಂಡವಪುರ: ಕ್ಷಯಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಷಯಾರೋಗ ತಪಾಸಣೆ ಮಾಡುವ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಆರೋಗ್ಯ ಇಲಾಖೆ ವತಿಯಿಂದ ಕ್ಷಯಮುಕ್ತ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಈಗಾಗಲೇ ಗುರುತಿಸಲ್ಪಟ್ಟಿರುವ ಹಳ್ಳಿಗಳಿಗೆ ವೈದ್ಯರ ತಂಡ ಭೇಟಿ ಕೊಟ್ಟು ಅಲ್ಲಿ ಯಂತ್ರಗಳಿಂದ ತಪಾಸಣೆ ನಡೆಸಿ ಕ್ಷಯ ರೋಗ ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ.
ಜತೆಗೆ ಕಿವಿ ದೋಷ ಇರುವಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಪರೀಕ್ಷೆ ನಡೆಸಿ ಕಿವಿ ದೋಷ ಇರುವ ಮಕ್ಕಳಿಗೆ ಕಿವಿಗೆ ಹಾಕುವ ಯಂತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಜತೆಗೆ ಕಣ್ಣಿನ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗುತ್ತಿದೆ. ರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಕ್ಷಯ ನಿರ್ಮೂಲನಾ ಅಧಿಕಾರಿ ಡಾ.ಆಶಾಲತಾ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಟಿಎಚ್‌ಒ ಡಾ.ಸಿ.ಎ.ಅರವಿಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಹಾಜರಿದ್ದರು.