ಮಂಡ್ಯದಲ್ಲಿ ಚೆನ್ನಮ್ಮ ದೇವೇಗೌಡ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.  
ಮಂಡ್ಯ

ತಾಯಿಯಿಲ್ಲದ ಕೊರಗು ನೀಗಿಸಿದ್ದ ಚೆನ್ನಮ್ಮ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭಾವುಕ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಎಸ್.ಬಿ.ಸಮುದಾಯ ಭವನದಲ್ಲಿ ನುಡಿನಮನ ಕಾರ್ಯಕ್ರಮ
  • ಜೆಡಿಎಸ್ ರಾಜ್ಯ ಮಹಿಳಾ ಘಟಕದಿಂದ ಆಯೋಜನೆ
ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರು ನನಗೆ ತಾಯಿ ಇಲ್ಲ ಎನ್ನುವ ಕೊರಗು ನೀಗಿಸಿದವರು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕ, ಜಿಲ್ಲಾ ಘಟಕ ಹಾಗೂ ನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಚೆನ್ನಮ್ಮ ದೇವೇಗೌಡ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1994 ರಲ್ಲಿ ದೇವೇಗೌಡರು ಸಿಎಂ ಆದ ಸಂದರ್ಭದಲ್ಲಿ ಕೆಆರ್‌ಎಸ್ ಡ್ಯಾಂಗೆ ಚೆನ್ನಮ್ಮ ಬಾಗಿನ ಅರ್ಪಿಸಿದಾಗ ಮೆರವಣಿಗೆ ಮೂಲಕ ಮಂಡ್ಯಕ್ಕೆ ಬಂದಿದ್ದರು. ಅವರು ನಿಧನರಾದ ದಿನ ಲಕ್ಷಾಂತರ ಜನ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮಂಡ್ಯದಲ್ಲಿ ಅವರ ಪುಣ್ಯ ಸ್ಮರಣೆ ಮಾಡಲಾಗುತ್ತಿದೆ ಎಂದು ಸ್ಮರಿಸಿದರು.
ಚೆನ್ನಮ್ಮ ದೇವೇಗೌಡರು ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಸಾರ್ವಜನಿಕ ಸೇವೆಯ ಮೂಲಕ ಜನರ ಮನಸಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಜು.31ರಂದು ಹಾಸನ ಜಿಲ್ಲೆ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅವರ ಉತ್ತರಕ್ರಿಯಾದಿ ಭೂ ಶಾಂತಿ ಕಾರ್ಯಕ್ರಮವಿದ್ದು, ಮಂಡ್ಯ ಜಿಲ್ಲೆಯಿಂದ ಭಾಗವಹಿಸುವವರಿಗೆ ಜಿಲ್ಲೆಯ ಜೆಡಿಎಸ್ ನಾಯಕರು ವಾಹನದ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ದೇವೇಗೌಡರು ರಾಜಕೀಯ ಜೀವನ ಉತ್ತಮವಾಗಿರಲು ಕಾರಣರಾದವರಲ್ಲಿ ಚೆನ್ನಮ್ಮ ಪ್ರಮುಖರು. ಇಂತಹ ಮಹಾನ್ ತಾಯಿಯ ನೆನಪು ಚಿರಕಾಲ ಜನಮಾನಸದಲ್ಲಿ ಉಳಿಯಬೇಕು. ಅವರ ಜೀವನ ಕ್ರಮ ಇಂದಿನ ಸಮಾಜಕ್ಕೆ ಆದರ್ಶವಾಗಬೇಕು. ಅಪಾರ ದೈವ ಭಕ್ತರಾಗಿದ್ದ ಅವರು ಅತಿಥಿ ಸತ್ಕಾರ ಪರಂಪರೆಗೆ ಅರ್ಥ ತುಂಬಿದ್ದರು. ಒಳ್ಳೆಯ ಸದ್ಗುಣಗಳಿಂದ ಜನಮನ್ನಣೆ ಗಳಿಸಬಹುದು ಎನ್ನುವುದಕ್ಕೆ ಚೆನ್ನಮ್ಮ ಅವರೇ ನಿದರ್ಶನ ಎಂದು ಹೇಳಿದರು.
ಚೆನ್ನಮ್ಮ ಅವರು ಸಾಮಾನ್ಯ ಮಹಿಳೆಯಲ್ಲ. ಅವರು ಆಸಿಡ್ ಹಾಕಿದವರಿಗೂ ಶಿಕ್ಷೆ ಕೊಡಬೇಡಿ ಎಂದು ಹೇಳಿದ ಮಹಾತಾಯಿ. ಅವರಲ್ಲಿ ಸೇಡಿನ ಮನೋಭಾವ ಇರಲಿಲ್ಲ. ಪ್ರಧಾನಮಂತ್ರಿಯ ಶ್ರೀಮತಿಯಾದರೂ ದೇವರ ಮನೆ, ಅಡುಗೆ ಮನೆ, ಆತಿಥ್ಯ ಬಿಟ್ಟರೆ ಹೊರಗಡೆ ಅವರು ಬರುತ್ತಿರಲಿಲ್ಲ. ಪುಸ್ತಕ ಓದುವ ಹವ್ಯಾಸ ಇಟ್ಟಕೊಂಡಿದ್ದರು. ಅವರ ಸರಳತೆಯನ್ನು ಮಹಿಳೆಯರು ಅನುಸರಿಸಬೇಕು ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಮಂಜುಳಾ ಉದಯಶಂಕರ್, ಜಯಶೀಲಮ್ಮ, ಸಿದ್ದರಾಮೇಗೌಡ, ಅಂಬುಜಮ್ಮ, ಡಾ.ಬಿ ಶಿವಲಿಂಗಯ್ಯ, ಮಂಜುನಾಥ್, ಕನ್ಯಾಕುಮಾರಿ, ಹೇಮಾವತಿ ಪದ್ಮಾವತಿ, ವತ್ಸಲಾ, ಬೋರೇಗೌಡ, ನಾಗಮ್ಮ ರಮೇಶ್ ಇತರರಿದ್ದರು.