ಮಂಡ್ಯ ನಗರದ ಗಾಂಧಿಭವನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಮಂಡ್ಯ

ಎಸ್.ಜಾನಕಿ ಅಗಲಿಕೆ ತುಂಬಲಾರದ ನಷ್ಟ: ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ನಗರದ ಗಾಂಧಿಭವನದಲ್ಲಿ ನುಡಿನಮನ
  • ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಕೃಷಿಕ ಅಲಯನ್ಸ್ ಸಂಸ್ಥೆ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ನಿಂದ ಆಯೋಜನೆ
ಮಂಡ್ಯ: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ ಅವರ ಅಗಲಿಕೆ ಸಿನಿಮಾ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಗಾಂಧಿಭವನದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಕೃಷಿಕ ಅಲಯನ್ಸ್ ಸಂಸ್ಥೆ, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಎಸ್.ಜಾನಕಿ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿ ಹಾಗೂ ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿಯೇ ವಿಭಿನ್ನ ಧ್ವನಿಗಳಲ್ಲಿ ಹಾಡುವ ಅದ್ಭುತ ಗಾಯಕಿ ಜಾನಕಿಯ ಅಮ್ಮನವರ ಸ್ವರಮಾಂತ್ರಿಕ ಸರಸ್ವತಿಯಾಗಿದ್ದರು. ಮಗುವಿನ ಧ್ವನಿ, ಯುವತಿ, ವೃದ್ದೆ ಧ್ವನಿಗಳಲ್ಲಿ ಹಾಡುಗಳನ್ನು ಹಾಡಿದ ಏಕೈಕ ಹಿನ್ನಲೆ ಗಾಯಕಿ. 20 ಭಾಷೆಯಲ್ಲಿ ಸುಮಾರು 48 ಸಾವಿರ ಹಾಡುಗಳನ್ನು ಹಾಡಿರುವ ಏಕೈಕ ಗಾಯಕಿ. 4 ರಾಷ್ಟ್ರೀಯ ಪ್ರಶಸ್ತಿ ಮತ್ತು 30ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನಿಮಾ ಸಾಹಿತ್ಯಕ್ಕೆ ಜೀವ ತುಂಬುವ ಜತೆಗೆ ಮಾದರಿ ಸರಳ ಜೀವನ ನಡೆಸಿದರು ಎಂದು ಸ್ಮರಿಸಿದರು.
ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿ, ಸಾಹಿತ್ಯ-ಸಂಗೀತ ಕ್ಷೇತ್ರ ಇರುವ ತನಕ ಎಸ್.ಜಾನಕಿ ಅವರು ಜೀವಂತ. ಮರೆತೇನೆಂದರೂ ಮರೆಯಲಾಗದು, ಸಂಗೀತ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿದ ಸ್ವರಮಾಂತ್ರಿಕೆ. ಅವರ ಗಾನ ಮಾಧುರ್ಯಕ್ಕೆ ಇಡೀ ಭಾರತವೇ ತಲೆದೂಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ನ ಲಿಂಗಣ್ಣ ಬಂಧುಕಾರ್, ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ಪ್ರಾಂತಪಾಲ ಚಂದ್ರಶೇಖರ್, ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಉದಯಶಂಕರ್, ಬಸವರಾಜು, ಡಿ.ಸಣ್ಣಯ್ಯ, ಪುಟ್ಟಸ್ವಾಮಿ, ಕಿಶೋರ್, ಮಹಾದೇವಯ್ಯ, ಮಂಜುಳಾ, ಲಕ್ಷ್ಮೀ ಇತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾಂಜಲಿ ಆಕಾಡೆಮಿ ಗಾಯಕರಾದ ಹಂಸಾ, ವಿಶ್ವಾಸ್, ಡೇವಿಡ್ ಅವರು ಎಸ್.ಜಾನಕಮ್ಮ ಅವರ ಹಾಡುಗಳನ್ನು ಹಾಡಿದರು.