ಮಂಡ್ಯ ನಗರದ ಕನ್ನಿಕಾಶಿಲ್ಪಾ ನವೋದಯ ತರಬೇತಿ ಕೇಂದ್ರದಲಿ ಕವಿ ಕೊ.ನಾ.ಪುರುಷೋತ್ತಮ ಶ್ರದ್ಧಾಂಜಲಿ ಅರ್ಪಿಸಲಾಯಿತು.
- ಕವಿ ಕೊ.ನಾ.ಪುರುಷೋತ್ತಮ ಅವರಿಗೆ ಶ್ರದ್ಧಾಂಜಲಿ
- ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನಲ್ ಟ್ರಸ್ಟ್ ನಲ್ಲಿ ಆಯೋಜನೆ
ಮಂಡ್ಯ: ಕಾವ್ಯದ ಕಡುಮೋಹಿಯಾಗಿದ್ದ ಕವಿ ಕೊ.ನಾ.ಪುರುಷೋತ್ತಮ ಅವರು ಸಾಹಿತ್ಯದ ಪರಿಚಾರಿಕೆ ಜತೆಗೆ ಲೇಖಕ ಮತ್ತು ಪ್ರಕಾಶಕರಾಗಿ ಉಚಿತ ಪುಸ್ತಕ ದಾಸೋಹ ಕಾಯಕವನ್ನು ಮಾಡಿದ ವಿಶಿಷ್ಟ ಕನ್ನಡ ಸೇವಕರಾಗಿದ್ದರು ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಸ್ಮರಿಸಿದರು.
ನಗರದ ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನಲ್ ಟ್ರಸ್ಟ್ ಹಾಗೂ ಕೊನಾಪು ಗೆಳೆಯರ ಬಳಗ ಆಯೋಜಿಸಿದ್ದ ಕವಿ ಕೊ.ನಾ. ಪುರುಷೋತ್ತಮ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕೊನಾಪು ಜಾತಿ ಮತ್ತು ಧರ್ಮದ ಗಡಿ ಮೀರಿದ ಅಪ್ಪಟ ಮಾನವತವಾದಿಯಾಗಿದ್ದರು. ಸಾಹಿತ್ಯದ ಚುಟಕು ಕಾವ್ಯ ಪ್ರಕಾರದ ರಚನೆಯಲ್ಲಿ ಸಿದ್ಧಹಸ್ತರಾಗಿದ್ದ ಕೊನಾಪು ಅವರು ಸುಮಾರು 25 ಕೃತಿಗಳನ್ನು ಅದೊಂದೇ ಪ್ರಕಾರದಲ್ಲಿ ರಚಿಸಿರುವುದು ಜಿಲ್ಲೆಯ ಮಟ್ಟಿಗೆ ಹೆಗ್ಗಳಿಕೆಯಾಗಿದೆ. ತಮ್ಮ ಚಟುಕುಗಳಿಗೆ ತಾವೇ ರೇಖಾಚಿತ್ರಗಳನ್ನು ರಚಿಸುವ ಮೂಲಕ ಕುಂಚ ಕಲಾವಿದರಾಗಿ ಸಹ ತಮ್ಮ ಪ್ರತಿಭೆಯನ್ನು ಮೆರೆದಿರುವುದು ವಿಶೇಷ ಎಂದರು.
ಸಾಹಿತಿ ಕೊತ್ತತ್ತಿ ರಾಜು ಮಾತನಾಡಿ, ಸಹೋದ್ಯೋಗಿ ಮತ್ತು ಆಪ್ತ ಗೆಳೆಯರಾಗಿದ್ದ ಕೊನಾಪು ನನಗೆ ನೆನಪು ಮಾತ್ರವಲ್ಲ. ಬದಲಿಗೆ ನನ್ನ ಭಾವಕೋಶ ಮತ್ತು ಜೀವಕೋಶದ ಭಾಗವಾಗಿದ್ದಾರೆ. ಜಾತಿ ಮತ್ತು ಧರ್ಮ ಕಟ್ಟನ್ನು ಮೀರಿ ಬದುಕಿದ ಅಪ್ಪಟ ಮನುಷ್ಯರವರು. ಕುಟುಂಬಕ್ಕಿಂತ ಹೆಚ್ಚಾಗಿ ಮತ್ತು ಹುಚ್ಚಾಗಿ ಕಾವ್ಯ ಆರಾಧನೆ ಮಾಡಿದ ಅವರಲ್ಲಿ ಹಾಸ್ಯ ಪ್ರವೃತ್ತಿ ಅಗಾಧವಾಗಿತ್ತು ಎಂದು ಭಾವುಕರಾಗಿ ನುಡಿದರು.
ಕನ್ನಿಕಾಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಮಾತನಾಡಿ, ಕೊನಾಪು ಇನ್ನೂ ಬದುಕಬೇಕಿತ್ತು. ಆರೋಗ್ಯ ಕಡೆಗೂ ಗಮನ ಕೊಡಬೇಕಿತ್ತು. ಅವರ ಅಕಾಲಿಕ ಸಾವಿನಿಯ ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವಾಗಿದೆ. ಕವಿಗಳು ಪರಸ್ಪರ ಸಾಹಿತ್ಯ ಮತ್ತು ಸಮಾಜಕ್ಕೆ ಆದ್ಯತೆ ಕೊಡುವ ಜೊತೆಗೆ ಕುಟುಂಬಕ್ಕೂ ಆದ್ಯತೆ ನೀಡಬೇಕು. ಜೊತೆಗೆ ಕವಿಗಳ ನಡುವೆ ಸ್ನೇಹ ಸಂಬಂಧ ಗಟ್ಟಿಯಾಗಬೇಕು ಎಂದು ಹೇಳಿದರು.
ಕವಯತ್ರಿ ಎಂ.ಯು.ಶ್ವೇತಾ, ಶಿಕ್ಷಕರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಮಂಜುಳಾ ರಮೇಶ್ ಮಾತನಾಡಿದರು. ಕವಿಗಳಾದ ಲೋಕೇಶ್ ಕಲ್ಕುಣಿ, ಕಟ್ಟೆ ಕೃಷ್ಣಸ್ವಾಮಿ, ರಂಗನಾಥ್ ಕ್ಯಾತನಹಳ್ಳಿ, ಆನಸೋಸಲು ಬಾಲಕೃಷ್ಣ, ಜೆ.ಕೆ.ಬಸವರಾಜು, ಶಶಿಧರ್ ಸಬ್ಬನಹಳ್ಳಿ ಕೊನಾಪು ಅವರಿಗೆ ’ಕಾವ್ಯ ನಮನ’ ಸಲ್ಲಿಸಿದರು. ಧನಂಜಯ ದಸರಗುಪ್ಪೆ, ದೊ.ಚಿ.ಗೌಡ, ಮಂಚಶೆಟ್ಟಿ ಕಡಿಲುವಾಗಿಲು, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಉಪನ್ಯಾಸಕ ಸಬ್ಬನಹಳ್ಳಿ ನಾಗರಾಜು, ಅಧ್ಯಾಪಕ ಮಂಗಲ ಎಂ.ಇ.ಶಿವಣ್ಣ, ಕವಿ ರೋಷನ್ ಚೋಪ್ರಾ, ನೇರಲಕೆರೆ ಲೋಕೇಶ್, ಆಶಾ ಹನಿಯಂಬಾಡಿ ಇತರರಿದ್ದರು.