ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಅವರು ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ನಡೆಸಲಿರುವ ಚಾರಣ ಕುರಿತಾಗಿ ಪೂರ್ವಭಾವಿ ಸಭೆ ನಡೆಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆ.15ರ ಬೆಳಗ್ಗೆ ತಾಲೂಕಿನ ಭೈರಸಂದ್ರ ಗ್ರಾಮದ ಐತಿಹಾಸಿಕ ಪುಣ್ಯಕ್ಷೇತ್ರ ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟಕ್ಕೆ ಚಾರಣ ಕೈಗೊಳ್ಳಲಿದ್ದಾರೆಂದು ಮಠದ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಸಭಾಂಗಣದಲ್ಲಿ ಚಾರಣ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಡಾ.ನಿರ್ಮಲಾನಂದನಾಥ ಶ್ರೀಗಳು ಶ್ರೀ ಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟ ಹತ್ತುವ ನಿರ್ಧಾರವು ಭಕ್ತವರ್ಗದಲ್ಲಿ ಹೊಸ ಧಾರ್ಮಿಕ ಭಾವನೆ ಮೂಡಿಸಲಿದೆ. ಶ್ರೀಗಳ ಪಾದಸ್ಪರ್ಶದಿಂದ ಹದ್ದಿನಕಲ್ಲು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ. ಅಲ್ಲದೆ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.
ಶ್ರೀಗಳ ಚಾರಣ ಕಾರ್ಯಕ್ರಮವು ಭಕ್ತಿ ಹಾಗೂ ಶ್ರದ್ಧೆಯಿಂದ ನಡೆಯಬೇಕು. ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಬೇಕು ಎಂದು ಕರೆ ನೀಡಿದರು.
ಆ.15ರಂದು ಬೆಳಗ್ಗೆ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೈರನಹಳ್ಳಿ ಗ್ರಾಮಕ್ಕೆ ಕರೆತಂದು ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡುವರು. ಬಳಿಕ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹದ್ದಿನಕಲ್ಲು ಕ್ಷೇತ್ರಕ್ಕೆ ಕರೆತರಲಾಗುವುದು. ಶ್ರೀ ಆಂಜನೇಯಸ್ವಾಮಿ ಉತ್ಸವಮೂರ್ತಿಯೊಂದಿಗೆ ಶ್ರೀಗಳು ಬೆಟ್ಟ ಹತ್ತಿ, ಬೆಟ್ಟದ ಮೇಲೆ ನೆಲೆಸಿರುವ ಹನುಮಂತರಾಯಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ, ಪೂಜೆ ಹಾಗೂ ಅಭಿಷೇಕ ನಡೆಯಲಿದೆ. ಐತಿಹಾಸಿಕ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಮತ್ತು ಅಂದು ಸ್ವಾತಂತ್ರ್ಯ ದಿನಾಚರಣೆ ಆಗಿರುವುದರಿಂದ ರಾಷ್ಟ್ರ ಧ್ವಜಾರೋಹಣ, ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ಜಂಡಾ ಊಂಚಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಸುಮಾರು 500 ಮಂದಿ ಸೇರಲು ಸ್ಥಳಾವಕಾಶ ಕಲ್ಪಿಸಲಾಗಿದ್ದು, ಸುಮಾರು 5 ಸಾವಿರ ಭಕ್ತರಿಗೆ ಬೆಳಗಿನ ಉಪಾಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಸ್ಥಳೀಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ.ರವಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಪಿ.ಧಮೇರ್ಂದ್ರ, ಸಮಾಜಸೇವಕ ಜವರನಹಳ್ಳಿ ಗೌರೀಶ್, ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್, ಮುಖಂಡರಾದ ಹರೀಶ್, ಹನುಮಂತು, ಪದ್ಮನಾಭ, ಯಾಸೀನ್, ನೀಲಾಮೂರ್ತಿ, ಪಿ.ಜೆ ಜಯರಾಂ, ಪಾಳ್ಯ ರಘು, ಮಂಜೇಗೌಡ, ಶಿವಣ್ಣ, ವೆಂಕಟೇಶ್, ಸೇರಿದಂತೆ ದೇವಾಲಯ ಸಮಿತಿ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡು ಸಿದ್ಧತೆಗಳ ಕುರಿತು ಸಲಹೆ ಸೂಚನೆ ನೀಡಿದರು.