ಮಂಡ್ಯದ ಅಶೋಕನಗರದಲ್ಲಿ ಮರಗಳ ಕಟಾವು ಮಾಡುತ್ತಿರುವುದು.
- ಮನೆಗಳಿಗೆ ಬೇರು ಹೋಗುತ್ತದೆ ಎನ್ನುವ ಆರೋಪ
- ಅರಣ್ಯ ಇಲಾಖೆ ನಡೆ ವಿರುದ್ಧ ಅಸಮಾಧಾನ
ಮಂಡ್ಯ: ಇಲ್ಲಿನ ಅಶೋಕನಗರ ಸೇರಿದಂತೆ ವಿವಿಧೆಡೆ ಇರುವ ಮರಗಳನ್ನು ಹನನ ಮಾಡಲು ಹೊರಟಿರುವ ಅರಣ್ಯ ಇಲಾಖೆ ನಡೆಯನ್ನು ಪರಿಸರ ಪ್ರೇಮಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.
ಅಶೋಕನಗರದಲ್ಲಿ ಮರಗಳನ್ನು ಕಟಾವು ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಅರಣ್ಯ ಇಲಾಖೆ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ನಗರದೆಲ್ಲೆಡೆ ಅಪಾಯ ಉಂಟು ಮಾಡುವ ಮರಗಳ ಕೊಂಬೆಗಳನ್ನು ಮಾತ್ರ ಕಟಾವು ಮಾಡಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ, ಆದರೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಮರಗಳ ಜತೆಗೆ ದಪ್ಪ ಕೊಂಬೆಗಳನ್ನು ಕಟಾವು ಮಾಡಿ ಅವು ಮತ್ತೆ ಚಿಗುರದಂತೆ ನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಸರ ಪ್ರೇಮಿ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಮನೆಗಳಿಗೆ ಬೇರು ಹೋಗುತ್ತದೆ ಎನ್ನುವ ಆರೋಪವನ್ನಿಟ್ಟುಕೊಂಡು ಮರಗಳನ್ನು ಕಡಿಯವುದನ್ನು ನಿಲ್ಲಿಸಬೇಕು. ಹಾಗೆಯೇ ಗಾಳಿ, ಮಳೆಯಿಂದ ಮರಗಳು ಮುರಿದು ಬೀಳುತ್ತಿವೆ ಎನ್ನುವ ಆತಂಕದಲ್ಲಿ ನೆರಳು ಕೊಡುವ ಹಳೆಯ ಬೃಹದಾಕಾರದ ಮರಗಳನ್ನು ಸರ್ವನಾಶ ಮಾಡಲು ನಿಂತಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ನಡೆ ಖಂಡನೀಯ ಎಂದರು.