ನಾಗಮಂಗಲ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಹೊಸ ಮಾರ್ಗದ ಬಸ್ ಸಂಚಾರಕ್ಕೆ ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಗುರುವಾರ ಚಾಲನೆ ನೀಡಿದರು. ಕೊಣನೂರು ಹನುಮಂತು, ಗೀತಾ ರಾಜು, ಧನರಾಜ್, ಶರತ್, ಮಹೇಶ್ ಇತರರು ಇದ್ದರು.
ನಾಗಮಂಗಲ: ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶ್ರಮಿಕರು ಹಾಗೂ ಜನಸಮಾನ್ಯರ ಅನುಕೂಲಕ್ಕಾಗಿ ಕಲ್ಲುದೇವನಹಳ್ಳಿ ಮೂಲಕ ಹೊಸ ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ತಿಳಿಸಿದರು.
ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಗುರುವಾರ ಹೊಸ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಕಲ್ಲುದೇವನಹಳ್ಳಿ, ಬುರುಗುಂಟೆ, ಹೆತ್ತಗೋನಹಳ್ಳಿ, ತೆಂಗಿನಭಾಗ, ಟಿ.ಚನ್ನಾಪುರ ಮಾರ್ಗದ ಹಲವು ಗ್ರಾಮಗಳಿಂದ ವ್ಯಾಸಂಗಕ್ಕಾಗಿ ನಿತ್ಯ ನಾಗಮಂಗಲ ಪಟ್ಟಣಕ್ಕೆ ಬರುವ ನೂರಾರು ವಿದ್ಯಾರ್ಥಿಗಳು, ರೈತರು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಗಮನ ಸೆಳೆದಿದ್ದರು. ಅದರಂತೆ ಕಲ್ಲುದೇವನಹಳ್ಳಿ ಮೂಲಕ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ನಾಗಮಂಗಲ ಘಟಕದ 70 ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯೆ ನೀಲಾಮೂರ್ತಿ ಮಾತನಾಡಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗೆ ಶಾಲಾ-ಕಾಲೇಜುಗಳ ಸಮಯಕ್ಕೆ ಅನುಕೂಲವಾಗುವಂತೆ ಬಸ್ ಸಂಚರಿಸಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಈ ಮಾರ್ಗದಲ್ಲಿ ಸಂಚಾರ ಆರಂಭಿಸಿ ಗ್ರಾಮಕ್ಕೆ ಬಂದ ಸಾರಿಗೆ ಬಸ್‌ಗೆ ಬುರುಡುಗುಂಟೆ, ಹೆತ್ತಗೋನಹಳ್ಳಿ ಮತ್ತು ತೆಂಗಿನಭಾಗ ಗ್ರಾಮಗಳ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕೊಣನೂರು ಹನುಮಂತು, ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಗೀತಾ ರಾಜು, ಧನರಾಜ್, ಶರತ್, ಕೆಎಸ್‌ಆರ್‌ಟಿಸಿ ನಾಗಮಂಗಲದ ಡಿಪೋ ವ್ಯವಸ್ಥಾಪಕ ಮಹೇಶ್, ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಮುಖಂಡರಾದ ಪಾಪಣ್ಣ, ಮುದ್ದೇಗೌಡ, ಮೋಹನ್, ಸತೀಶ್, ಇಜ್ಜಲಘಟ್ಟ ಲೋಕೇಶ್, ಗೀತಾ ದಾಸೇಗೌಡ, ಎನ್.ಕೆ.ವಸಂತಮಣಿ ಇದ್ದರು.