ಮಂಡ್ಯ ನಗರದ ಭಾರತೀಯ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಉದ್ಘಾಟಿಸಿದರು.
- ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
- ರೆಡ್‌ಕ್ರಾಸ್ ಭವನದಲ್ಲಿ ಆಯೋಜನೆ
ಮಂಡ್ಯ: ವಿಪತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡುವುದರಿಂದ ಜೀವರಕ್ಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.
ನಗರದ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಹಾಗೂ ಜಿಲ್ಲಾ ಶಾಖೆ ಸಹಯೋಗದಲ್ಲಿ ಯುವ ರೆಡ್ ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೆಡ್‌ಕ್ರಾಸ್ ಸಂಸ್ಥೆ ಪ್ರಪಂಚದಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸಿ ಸಾರ್ವಜನಿಕರಿಗೆ ರಕ್ತ ಹಾಗೂ ಪ್ರಥಮ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಯುವಶಕ್ತಿ ದೇಶದ ಶಕ್ತಿ, ಜಿಡಿಪಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಶೇ.65ರಷ್ಟು ಜನ 35 ವರ್ಷದೊಳಗಿನ ಯುವಕರಾಗಿದ್ದಾರೆ. ಇವರ ಸಾಮರ್ಥ್ಯವನ್ನು ಬಳಸಿಕೊಂಡು ರಕ್ತದಾನ ಹಾಗೂ ಸಮಾಜಮುಖಿ ಕೆಲಸ ಮಾಡಬಹುದು. ಯುವಜನರನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ರಕ್ತದಾನ ಶಿಬಿರವನ್ನು ಮಾಡುವುದರಿಂದ ರಕ್ತದ ಸಮಸ್ಯೆ ಹೋಗಲಾಡಿಸಬಹುದು. ಇದಕ್ಕೆ ವಿದ್ಯಾರ್ಥಿಗಳು ಸಹಕಾರ ಅಗತ್ಯ. ಸಾರ್ವಜನಿಕರಿಗೆ ಅಗತ್ಯವಾಗಿರುವ ರಕ್ತದ ಬೇಡಿಕೆಯನ್ನು ನಿಗದಿತ ಅವಧಿಯಲ್ಲಿ ಸಿಗುವ ಕೆಲಸ ಮಾಡಬಹುದು ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಜಿಲ್ಲಾದ್ಯಂತ ಮಾನವೀಯ ಮೌಲ್ಯ ಬೆಳೆಸುವ ಅನೇಕ ಕಾರ್ಯಕ್ರಮಗಳನ್ನು ರೆಡ್‌ಕ್ರಾಸ್ ಸಂಸ್ಥೆ ನಡೆಸುತ್ತಿದೆ. ರೆಡ್‌ಕ್ರಾಸ್ ಸಂಸ್ಥೆಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಕ್ತದಾನ ಶಿಬಿರ, ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮಗಳನ್ನು ನಿಸ್ವಾರ್ಥ ಭಾವದಿಂದ ನಡೆಸುತ್ತಿರುವುದು ಯುವ ಜನತೆಗೆ ಪ್ರೇರಣಾದಾಯಕ. ಪ್ರಕೃತಿ ವಿಕೋಪಗಳು ಅಥವಾ ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಗಾಬರಿಯಾಗದೆ ದಿಟ್ಟತನ ಮತ್ತು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಪ್ರಥಮ ಚಿಕಿತ್ಸೆಯನ್ನು ವೈದ್ಯರಲ್ಲದೆ ಸಾಮಾನ್ಯ ಜನರು ಮಾಡಬಹುದು. ಅಪಘಾತಗಳಲ್ಲಿ ನೂರು ಜನರಲ್ಲಿ ಮೂವತ್ತು ಜನ ಪ್ರಥಮ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕಾಗಿ ದೇಶದ ನಾಗರಿಕರಿಗೆ ಪ್ರಥಮ ಚಿಕಿತ್ಸೆಯ ಅರಿವು ಇರಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಆಯುರ್ವೇದ ಆಸ್ಪತ್ರೆ ತಜ್ಞ ವೈದ್ಯೆ ಹಾಗೂ ಪ್ರಥಮ ಚಿಕಿತ್ಸೆ ತರಬೇತುದಾರರಾದ ಡಾ.ಉಷಾರಾಣಿ ಪ್ರಥಮ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎನ್.ರಾಘವೇಂದ್ರ ವಿಪತ್ತು ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡಿದರು. ಮಂಡ್ಯ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ.ಎಂ.ವೈ.ಶಿವರಾಮು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ಕೆ.ಎಸ್.ಷಡಕ್ಷರಿ, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು.