ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛ ಭಾರತ್ ಮಿಷನ್(ನಗರ ) 2.0 ಯೋಜನೆಯಡಿ ತರಬೇತಿ
  • ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಆಯೋಜನೆ
  • ಜಿಲ್ಲಾಧಿಕಾರಿ ಸೇರಿದಂತೆ ಗಣ್ಯರು ಭಾಗಿ
ಮಂಡ್ಯ: ಮನೆಗಳಲ್ಲಿಯೇ ಪ್ರಾಥಮಿಕ ಹಂತದಲ್ಲಿ ಕಸ ವಿಂಗಡಣೆ ಆಗಬೇಕು. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಬಹಳ ಅಗತ್ಯವಾಗಿದ್ದು, ಪ್ರತಿ ಮನೆಯಲ್ಲೂ ಜಾಗೃತಿ ಮೂಡಿಸಿ. ಆ ಮೂಲಕ ಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಸ್ವಚ್ಛ ಭಾರತ್ ಮಿಷನ್(ನಗರ ) 2.0 ಯೋಜನೆಯಡಿ ಸ್ವಚ್ಛ ಸರ್ವೇಕ್ಷಣ ಅಭಿಯಾನ 2025-26 ವಿಷಯದ ಕುರಿತು ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಗರ ಮತ್ತು ಪರಿಸರವನ್ನು ಸ್ವಚ್ಛ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿ. ನಗರದ ಅಭಿವೃದ್ಧಿ ಸಮಾಜದ ಅಭಿವೃದ್ಧಿ. ಜತೆಗೆ ಪರಿಸರ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ಹೆಚ್ಚು ಆಗಬೇಕು ಎಂದರು.
ಸ್ವಚ್ಛ ಭಾರತ್ ಮಿಷನ್‌ನ ಅಧಿಕಾರಿಗಳ ಕಾರ್ಯ ವೈಖರಿ, ಪ್ರಯತ್ನ, ಪರಿಶ್ರಮ, ಬಹಳ ಮುಖ್ಯ. ಸ್ವಚ್ಛ ಭಾರತ್ ಮಿಷನ್(ನಗರ ) 2.0 ಯೋಜನೆಯಡಿ ಬರುವ ಮಾನದಂಡ ಮತ್ತು ಸೂಚನೆಗಳನ್ನು ಪಾಲಿಸುವ ಮೂಲಕ ನಗರಕ್ಕೆ ಒಳ್ಳೆಯ ಹೆಸರು ತರುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು. ಸ್ವಚ್ಛತೆಯು ಸಾಮಾಜಿಕ ಹೊಣೆಗಾರಿಕೆ ಆಗಿದೆ. ಆದ್ದರಿಂದ ಸುಸ್ಥಿತ ಸಮಾಜದಲ್ಲಿ ನಗರದ ಜನರು ಪ್ರಜ್ಞಾವಂತರಾಗಿ ಬುದ್ದಿವಂತರಾಗಿ ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಹಾಗೂ ಜಾಗೃತಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ರಸ್ತೆ ಬದಿಯಲ್ಲಿ ಕಸ ಹಾಕುವುದು ಕಾನೂನು ಉಲ್ಲಂಘನೆ. ಅಂತೆಯೇ ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಸ್ವಚ್ಛ ಮನಸಿದ್ದರೆ ಮಾತ್ರ ಸ್ವಚ್ಛ ಪರಿಸರ ಉಳಿಸಲು ಸಾಧ್ಯ. ಸಾರ್ವಜನಿಕರು ಪರಿಸರ ಸ್ವಚ್ಛತೆಯನ್ನು ಕೆಡಿಸುವ ಕೆಲಸ ಮಾಡಬಾರದು. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡಬೇಕು. ನಮ್ಮ ನಗರದಲ್ಲಿ ಶೇ.100ರಷ್ಟು ಕಸ ಸಂಗ್ರಹಣೆ ಆಗುತ್ತಿದೆ. ಕಸವನ್ನು ಸಂಗ್ರಹಣೆ ಮಾಡುವುದು ಎಷ್ಟು ಮುಖ್ಯವೋ ವಿಂಗಡಣೆಯು ಕೂಡ ಬಹಳ ಮುಖ್ಯ. ಆದ್ದರಿಂದ ಕಸ ವಿಂಗಡಣೆ ಮಾಡಬೇಕು. ಹಸಿ ಕಸ, ಒಣ ಕಸವನ್ನು ವಿಂಗಡಿಸಬೇಕು. ಹಾಗೂ ಪ್ಲಾಸ್ಟಿಕ್ ಅನ್ನು ಬಳಸಬಾರದು ಎಂದು ಸೂಚಿಸಿದರು.
ನಗರದ ಸ್ವಚ್ಛತೆಯನ್ನು ಸಮಾಜದ ನೈರ್ಮಲ್ಯ ವನ್ನು ಕಾಪಾಡುವುದು ನಮ್ಮ ಕರ್ತವ್ಯ. ಮಹಾತ್ಮ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ಅವರ ಚಿಂತನೆಗಳನ್ನು ಇಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ತಿಳಿಸಲು ಸ್ವಚ್ಛ ಸರ್ವೇಕ್ಷಣ ಅಭಿಯಾನದ ಸಾಕ್ಷೃಚಿತ್ರದ ದಾಖಲೆಗಳು ಮತ್ತು ಚಟುವಟಿಕೆಗಳನ್ನು ಮಾಡಬೇಕು. ಕಸವನ್ನು ಮರುಬಳಕೆ ಮಾಡಿ ಗೊಬ್ಬರವಾಗಿ ಪರಿವರ್ತಿಸಿ ಕಸದಿಂದ ಆದಾಯ ಗಳಿಸುವಂತಹ ಕೆಲಸವನ್ನು ಮಾಡಬೇಕು. ನಗರದ ಪರಿಸರ ಸ್ವಚ್ಛತೆಯಿಂದ ಇದ್ದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಕಸ ಮುಕ್ತ ನಗರವನ್ನಾಗಿ ಮಾಡುವುದು ನಮ್ಮೆಲರ ಜವಾಬ್ದಾರಿ ಎಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ನಗರವನ್ನು ಕಸ ಮುಕ್ತ ಹಾಗೂ ಬಯಲು ಶೌಚ ಮುಕ್ತವಾಗಿ ಮಾಡಬೇಕು. ಹಸಿ ಕಸ ಒಣ ಕಸವನ್ನು ವಿಂಗಡಿಸಿ ಡಸ್ಟ್‌ಬಿನ್‌ಗೆ ಹಾಕಬೇಕು. ಹಾಗೂ ಪ್ಲಾಸ್ಟಿಕ್ ಮುಕ್ತ ನಗರವಾಗಿ ಮಾಡಬೇಕು ಎಂದರು
ಪೌರಾಯುಕ್ತೆ ಪಂಪಶ್ರೀ, ಪರಿಸರ ವಿಭಾಗದ ಇಂಜಿನಿಯರ್ ರುದ್ರೇಗೌಡ, ಸಹಾಯಕ ಇಂಜಿನಿಯರ್ ಪ್ರತಾಪ್ ಇದ್ದರು.