ಮಂಡ್ಯ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಉದ್ಘಾಟಿಸಿದರು.
- ನಗರದಲ್ಲಿ ವಾರ್ಷಿಕ ಕ್ರಿಯಾ ಯೋಜನೆ ಕಾರ್ಯಾಗಾರ
- ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಗ್ರಾಮೀಣ ಕುಟುಂಬದ ಆದಾಯ ಹೆಚ್ಚಳ, ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಯಂ ಉದ್ಯೋಗಕ್ಕೆ ಉತ್ತೇಜನ, ಸ್ವಸಹಾಯ ಸಂಘಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಾಣ ಹಾಗೂ ಬಡತನ ನಿರ್ಮೂಲನೆಯೇ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಆರ್‌ಎಲ್‌ಎಂ)ದ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಪ್ರತಿ ಚಟುವಟಿಕೆಯೂ ಫಲಿತಾಂಶ ಆಧಾರಿತವಾಗಿರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಆರ್‌ಎಲ್‌ಎಂ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಕೃಷಿ ಮತ್ತು ಕೃಷಿಯೇತರ ಜೀವನೋಪಾಯ, ಕೌಶಲಾಭಿವೃದ್ಧಿ, ಹಣಕಾಸು ಸೇರ್ಪಡೆ, ಮಾರುಕಟ್ಟೆ ಸಂಪರ್ಕ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ವಾರ್ಷಿಕ ಕ್ರಿಯಾ ಯೋಜನೆ ಎನ್ನುವುದು ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಬೇಕಾದ ಚಟುವಟಿಕೆ, ಗುರಿ, ವೆಚ್ಚ, ಜವಾಬ್ದಾರಿ ಹಾಗೂ ಅನುಷ್ಠಾನದ ರೂಪುರೇಷೆಗಳನ್ನು ಒಳಗೊಂಡಿರುತ್ತದೆ. ಯೋಜನೆಯ ಉದ್ದೇಶ, ವಾರ್ಷಿಕ ಗುರಿ, ವಿವಿಧ ಚಟುವಟಿಕೆಗಳ ವಿವರ, ಬಜೆಟ್ ಹಾಗೂ ವೆಚ್ಚ ನಿರ್ವಹಣೆ, ಅಧಿಕಾರಿಗಳ ಜವಾಬ್ದಾರಿಗಳು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಅಂಶಗಳನ್ನು ಸಮಗ್ರವಾಗಿ ಒಳಗೊಂಡಂತೆ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಸೂಚಿಸಿದರು.
ಯೋಜನೆಯ ಯಶಸ್ಸಿಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಪ್ರತಿ ಅಧಿಕಾರಿಯೂ ಮಾರ್ಗಸೂಚಿ, ನಿಯಮ ಹಾಗೂ ಜವಾಬ್ದಾರಿ ಕುರಿತು ಸಂಪೂರ್ಣ ಅರಿವು ಹೊಂದಿರಬೇಕು. ಯೋಜನೆಯ ಕುರಿತು ಸಮರ್ಪಕ ಜ್ಞಾನವಿಲ್ಲದೆ ಅಧೀನ ಸಿಬ್ಬಂದಿಗೆ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಕಲಿತು ಅಗತ್ಯವಿದ್ದಲ್ಲಿ ಅನುಭವಿಗಳಿಂದ ತಿಳಿದುಕೊಂಡು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಜನೆಯ ಅನುಷ್ಠಾನದಲ್ಲಿ ತಂಡದ ಕೆಲಸಕ್ಕೆ ಹೆಚ್ಚಿನ ಮಹತ್ವವಿದೆ. ಟಿಪಿಎಂ, ಸಮುದಾಯ ಸಂಯೋಜಕರು, ಬಿಆರ್‌ಪಿ, ಎಂಬಿಕೆ, ಎಲ್‌ಸಿಆರ್‌ಪಿ, ಒಕ್ಕೂಟದ ಅಧ್ಯಕ್ಷರು ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಅಧಿಕಾರವನ್ನು ಕೆಲವೇ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸದೆ, ಪ್ರತಿಯೊಬ್ಬರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಯೋಜನೆಯ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿ ತಿಂಗಳು ಕಡ್ಡಾಯವಾಗಿ ತಾಲೂಕು ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲ ಸಿಬ್ಬಂದಿ ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಜಿಪಿಎಸ್ ಛಾಯಾಚಿತ್ರ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಂಡಿಸಬೇಕು. ಸಭೆಯ ಸಂಪೂರ್ಣ ಕಾರ್ಯವಿವರಣೆಯನ್ನು ದಾಖಲಿಸಿ ಜಿಪಂಗೆ ಸಲ್ಲಿಸಬೇಕು ಎಂದರು.
ಪ್ರತಿ ಸಿಬ್ಬಂದಿಯೂ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಳ್ಳಲು ಪ್ರತ್ಯೇಕ ವಾಟ್ಸ್‌ಆ್ಯಪ್ ಗುಂಪು ರಚಿಸಿ, ನಿಯಮಿತವಾಗಿ ಪ್ರಗತಿ ವರದಿ ಸಲ್ಲಿಸಬೇಕು. ಹಿರಿಯರು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿ ಯಾವುದೇ ಹಿಂಜರಿಕೆಯಿಲ್ಲದೆ ಅನುಭವಿಗಳಿಂದ ಕಲಿತುಕೊಳ್ಳಬೇಕು. ತಾಪಂಗಳು ಎನ್‌ಆರ್‌ಎಲ್‌ಎಂ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿದಿನ ಅವರ ಕಾರ್ಯಗಳ ಕುರಿತು ಪರಿಶೀಲನೆ ನಡೆಸಬೇಕು. ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಗೂ ಜಿಲ್ಲಾಮಟ್ಟದ ಪರಿಶೀಲನಾ ಸಭೆಗೆ ಮುನ್ನ ತಾಲೂಕು ಮಟ್ಟದಲ್ಲಿ ಸಮಗ್ರ ವಿಮರ್ಶೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಎನ್‌ಆರ್‌ಎಲ್‌ಎಂ ಯೋಜನೆಯಲ್ಲಿ ಆರ್ಥಿಕ ಶಿಸ್ತು ಅತ್ಯಂತ ಪ್ರಮುಖವಾಗಿದೆ. ಲೆಕ್ಕಪತ್ರ, ಆಡಿಟ್ ಹಾಗೂ ಇತರೆ ಹಣಕಾಸು ನಿರ್ವಹಣೆಯನ್ನು ಸರ್ಕಾರದ ಮಾರ್ಗಸೂಚಿಗಳಂತೆ ಕಡ್ಡಾಯವಾಗಿ ನಿರ್ವಹಿಸಬೇಕು. ಲೆಕ್ಕಪತ್ರಗಳನ್ನು ನವೀಕರಿಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಮಟ್ಟದ ಸಮಿತಿ ರಚಿಸಿ ಯಾವುದೇ ಸಮಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಅಚ್ಚರಿಯ ಪರಿಶೀಲನೆ ನಡೆಸಲಾಗುವುದು. ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ಅರ್ಹತೆ, ಕೌಶಲ ಹಾಗೂ ಆಸಕ್ತಿಯ ಆಧಾರದ ಮೇಲೆ ನಿಯಮಾನುಸಾರ ಪೂರ್ಣಗೊಳಿಸಬೇಕು. ತಾಲೂಕು ಮಟ್ಟದಲ್ಲಿ ಭರ್ತಿ ಮಾಡಬಹುದಾದ ಹುದ್ದೆಗಳನ್ನು ಆಗಸ್ಟ್ ಮಾಹೆಯ ಅಂತ್ಯದೊಳಗೆ ಪೂರ್ಣಗೊಳಿಸಿ, ಉಳಿದ ಹುದ್ದೆಗಳ ವಿವರವನ್ನು ಜಿಪಂಗೆ ಸಲ್ಲಿಸಬೇಕು ಎಂದರು.
ಜಿಪಂ ಯೋಜನಾ ನಿರ್ದೇಶಕ ಸುಂದರ್‌ರಾಜ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ಸೇರಿದಂತೆ ತಾಪಂ ಇಒ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಫಿ ಕಿಯೋಸ್ಕ್ ಸ್ಥಾಪಿಸಲು ಗುಂಪು ಆಯ್ಕೆ
ಜಿಲ್ಲೆಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಜೀವನೋಪಾಯ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ 91 ಕಾಫಿ ಕಿಯೋಸ್ಕ್ ಸ್ಥಾಪಿಸಲು ಗುರಿ ನಿಗದಿಪಡಿಸಲಾಗಿದೆ. ಇದಕ್ಕೆ ಅರ್ಹ ಸ್ವ-ಸಹಾಯ ಗುಂಪುಗಳನ್ನು ಗುರುತಿಸಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ನಿರ್ದೇಶನ ನೀಡಿದರು.
ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಾಗೂ ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಸ್ಥಳಗಳಲ್ಲಿ ಸಂಜೀವಿನಿ ಮಹಿಳೆಯರು ಉತ್ಪಾದಿಸುವ ವಿವಿಧ ಅಕ್ಕ ಬ್ರಾೃಂಡ್ ಪ್ರೀಮಿಯಂ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ 21 ಸಮಗ್ರ ಕೃಷಿ ಸಮೂಹಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಿಎಫ್‌ಟಿಆರ್‌ಐ ತಾಂತ್ರಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ಸಮಗ್ರ ಕೃಷಿ ಸಮೂಹಗಳ ವಿವರವಾದ ಯೋಜನಾ ವರದಿಗಳನ್ನು ಪರಿಷ್ಕರಿಸಿ, ಮೊದಲ ಹಂತದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಮಾದರಿ ಜೀವನೋಪಾಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡು ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇತ್ತೀಚೆಗೆ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಅಕ್ಕ ಕೆಫೆ ನಿರ್ವಹಣೆಗೆ ಅರ್ಹ ಸ್ವ-ಸಹಾಯ ಗುಂಪುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ದಾಖಲಾತಿಗಳ ಸಮರ್ಪಕ ನಿರ್ವಹಣೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಸಿಇಒ, ಇದೇ ಮಾದರಿಯನ್ನು ಉಳಿದ ತಾಲೂಕಿನವರು ಅನುಸರಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಮಾತ್ರ ಎನ್‌ಆರ್‌ಎಲ್‌ಎಂ ಯೋಜನೆಯ ಉದ್ದೇಶ ಸಂಪೂರ್ಣವಾಗಿ ಈಡೇರುತ್ತವೆ ಎಂದು ತಿಳಿಸಿದರು.