ಮಂಡ್ಯ ನಗರದ ಜಿಪಂ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು.  
ಮಂಡ್ಯ

ಅಂತರ್ಜಾಲದ ಬಳಕೆ ಕಡಿಮೆ ಮಾಡಲಿ: ಎಡಿಸಿ ಬಿ.ಸಿ.ಶಿವಾನಂದಮೂರ್ತಿ ಸಲಹೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸುರಕ್ಷತಾ ಅಂತರ್ಜಾಲ ದಿನದ ಅಂಗವಾಗಿ ಕಾರ್ಯಾಗಾರ
  • ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಅವರ ಮನಸ್ಥಿತಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಸುರಕ್ಷತಾ ಅಂತರ್ಜಾಲ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಯವನ್ನು ಬಹುತೇಕ ಟಿ.ವಿ, ಮೊಬೈಲ್ಗಳಲ್ಲಿಯೆ ಕಳೆಯುತ್ತಿದ್ದೇವೆ. ಪರಿಣಾಮ ಜವಾಬ್ದಾರಿಯನ್ನು ಮರೆಯುತ್ತಿದ್ದೇವೆ ಎಂದು ತಿಳಿಸಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಮಿದುಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯರಲ್ಲಿ ಹೆಚ್ಚಾಗುತ್ತಿವೆ. 20 ವರ್ಷದ ಹಿಂದೆ ಜನರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆದು ಕೆಲಸದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು. ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಆದರೆ ಇಂದು ಅತಿಯಾದ ಮೊಬೈಲ್ ಬಳಕೆಯಿಂದ ಎಲ್ಲರ ಬದುಕಿನಲ್ಲಿಯೂ ಒತ್ತಡ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ತಂತ್ರಜ್ಞಾನವನ್ನು ಬಳಸಿ ಯಾವುದೇ ಪ್ರಶ್ನೆಗಳಿಗಾದರೂ ಉತ್ತರವನ್ನು ಕ್ಷಣಾರ್ಧದಲ್ಲಿಯೇ ಕಂಡುಕೊಳ್ಳಬಹುದು. ಅಂತರ್ಜಾಲವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಸಮಯ ಅಂತರ್ಜಾಲದಲ್ಲಿ ಕಳೆಯುವುದು ಒಳ್ಳೆಯದಲ್ಲ. ಸಾಧ್ಯವಾದಷ್ಟು ಅಂತರ್ಜಾಲದಿಂದ ದೂರ ಉಳಿಯಬೇಕು. ಸಾರ್ವಜನಿಕರು ಇದರ ಕುರಿತಾಗಿ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಚೇರಿ ಕೆಲಸಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್‌ಗಳ್ಳರು ನಿಮ್ಮ ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆದು ನಿಮ್ಮ ಹಿಂದೆ ಬೀಳುತ್ತಾರೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಿರಿ. ಸೈಬರ್ ಕಳ್ಳರಿಂದ ಯಾವುದೇ ಕರೆ ಬಂದರೂ ಸಹ ಧೃತಿಗೆಡದೆ ಸಹಾಯವಾಣಿಗೆ ಕರೆ ಮಾಡಿ ಪ್ರಕರಣ ದಾಖಲಿಸಿ. ಈ ಮೂಲಕ ಸೈಬರ್ ವಂಚನೆಯಿಂದ ದೂರ ಉಳಿಯಿರಿ. ಇದರ ಕುರಿತಾಗಿ ನಿಮ್ಮ ಒಡನಾಡಿಗಳಿಗೂ ಅರಿವು ಮೂಡಿಸಿ ಎಂದು ಹೇಳಿದರು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಹಿರಿಯ ತಾಂತ್ರಿಕ ನಿರ್ದೇಶಕಿ ಸಂಗೀತಾ ಮಂಜುನಾಥ್ ಮಾತನಾಡಿ, ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಪರಿಣಾಮ ಅವರ ಆರೋಗ್ಯ ಹಾಗೂ ಮಾನಸಿಕ ಸಮಸ್ಯೆ ಉದ್ಭವಿಸುತ್ತಿದೆ. ಮಕ್ಕಳು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಮರೆತು ಹೋಗಿದ್ದಾರೆ ಎಂದು ಹೇಳಿದರು.
ಜನರು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಫೋಟೋಗಳ ಹಂಚಿಕೆಯನ್ನು ಕಡಿಮೆ ಮಾಡಬೇಕು. ಇದರಿಂದ ಸೈಬರ್ ಕಳ್ಳರು ಡೀಪ್ ಫೇಕ್‌ನಂತಹ ಅಪಾಯ ಉಂಟಾಗುತ್ತದೆ. ಅಂತರ್ಜಾಲದಲ್ಲಿ ಫ್ರಾಡ್ ಆಗುವ ಸಾಧ್ಯತೆ ಇರುತ್ತದೆ. ಸುಳ್ಳು ಮಾಹಿತಿಯನ್ನು ಹರಿ ಬಿಡಲಾಗುತ್ತಿದೆ. ಜನರು ಇದರ ಕುರಿತಾಗಿ ಅರಿಯಬೇಕು. ಆಗ ಮಾತ್ರ ಆನ್‌ಲೈನ್ ವಂಚನೆಯಿಂದ ಬಚಾವಾಗಬಹುದು. ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ಓ.ಟಿ.ಪಿ, ಯು.ಪಿ.ಐ ಪಿನ್ ಅನ್ನು ಯಾರೆ ಕೇಳಿದರೂ ಹೇಳಬೇಡಿ. ಇಂತಹ ಕರೆ ಬಂದ ನಂತರ ಭಯ ಪಡದೆ ಸೈಬರ್ ಸಂಖ್ಯೆ 930 ಗೆ ಕರೆ ಮಾಡಿ ಪ್ರಕರಣ ದಾಖಲಿಸಿ ಎಂದು ಮಾಹಿತಿ ನೀಡಿದರು.
ಜಿಲ್ಲಾ ರಾಷ್ಟ್ರೀಯ ಮಾಹಿತಿ ಕೇಂದ್ರದ ಕೆ.ವಿ.ಕೆ.ಅಪ್ಪರಾವ್ ಇತರರಿದ್ದರು. ಕಾರ್ಯಾಗಾರದ ನಂತರ ಸೈಬರ್ ಕ್ರೈಂಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.