ಮಂಡ್ಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಉದ್ಘಾಟಿಸಿದರು.
- ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ ಅಭಿಯಾನ
- ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
- ನ್ಯಾಯಾಧೀಶರು, ಜಿಲ್ಲಾಧಿಕಾರಿ ಸೇರಿದಂತೆ ಹಲವರು ಭಾಗಿ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಡ್ರಗ್ಸ್‌ಗೆ ಮಕ್ಕಳು ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಅಧಿಕಾರಿಗಳು ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಸಂರಕ್ಷಣೆ ಮತ್ತು ಕಾನೂನು ಕುರಿತು ಬೃಹತ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯು ದೇಶಕ್ಕೆ ಪ್ರೇರಣೆಯಾಗಬೇಕು ಹೊರತು ಮಾದಕ ವಸ್ತುಗಳಿಗೆ ಮೊರೆ ಹೋಗಬಾರದು ಎಂದು ಹೇಳಿದರು.
ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಮಾಹಿತಿ ಹಾಗೂ ಕಾನೂನಿನ ಜ್ಞಾನ ಬಹಳ ಮುಖ್ಯ. ವಾಹನ ಚಲಾಯಿಸುವ ಹೆಲ್ಮೆಟ್, ಚಾಲನಾ ಪರವಾನಗಿ, ವಾಹನದ ಭದ್ರತಾ ವಿಮೆ ಹೊಂದಿರಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ದೇಶದಲ್ಲಿ ಶೇ.43ರಷ್ಟು ಸಣ್ಣ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಪಾಲಕರ ಮಕ್ಕಳ ಮೇಲೆ ಜ್ಞಾನ ವಹಿಸಬೇಕು. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪಾಲಕರ ಪಾತ್ರ ಬಹಳ ಮುಖ್ಯ. ಮಕ್ಕಳನ್ನು ದೇಶದ ಸಂಪತ್ತನ್ನಾಗಿ ಮಾಡಬೇಕೆ ಹೊರತು ಮಕ್ಕಳ ಆಸೆ, ಆಕಾಂಕ್ಷೆ, ಭಾವನೆಯನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರತಿವರ್ಷ ಸುಮಾರು 65 ರಿಂದ 70 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದೆ. ಆದರೆ ಕಳೆದ ವರ್ಷ 14 ಪ್ರಕರಣಗಳು ಮಾತ್ರ ದಾಖಲಾಗಿವೆ. ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವನ್ನಾಗಿ ಮಾಡಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸರ್ಕಾರ, ಸಂಘ ಸಂಸ್ಥೆ, ಅಧಿಕಾರಿಗಳು, ಎಲ್ಲರೂ ಸಾರ್ವಜನಿಕರು ಜತೆಯಾಗಿ ಬಾಲ್ಯ ವಿವಾಹವನ್ನು ತೊಡೆದು ಹಾಕಬೇಕು ಎಂದು ಹೇಳಿದರು.
ಸರ್ಕಾರ, ಸಂಘ ಸಂಸ್ಥೆ, ಅಧಿಕಾರಿಗಳು, ಎಲ್ಲರೂ ಸಾರ್ವಜನಿಕರು ಜೊತೆಯಾಗಿ ಬಾಲ್ಯ ವಿವಾಹವನ್ನು ತೊಡೆದು ಹಾಕಬೇಕು. ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪಾಲಕರು ಮತ್ತು ಸಮಾಜದ ಜವಾಬ್ದಾರಿ ಬಹಳ ಅಗತ್ಯ. ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಬಾಲ್ಯ ವಿವಾಹ ಪದ್ಧತಿಯನ್ನು ಕಾನೂನಿನಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ. ಪಾಲಕರ ಮಾನವೀಯತೆ, ಹೃದಯವಂತಿಕೆದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಯುವಜನತೆ ಕಾನೂನಿನ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯ ಪಾತ್ರ ಬಹಳ ಮುಖ್ಯ. ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ಮಂಡ್ಯ ಶ್ರೀಮಂತ ಜಿಲ್ಲೆ. ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಬೇಕು ಪಾಲಕರು ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು. ಅವರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾದ ರೀತಿಯಲ್ಲಿ ನೋಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಎಲ್ಲರಿಗೂ ಸಮಾನವಾದ ಹಕ್ಕುಗಳು ಇವೆ. ಮಕ್ಕಳ ಪರಿಪೂರ್ಣ ಬೆಳವಣಿಗೆ ತುಂಬಾ ಮುಖ್ಯ, ಮಕ್ಕಳ ಭಾವನೆಗಳನ್ನು ಕಟ್ಟಿ ಹಾಕಬಾರದು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ ಮಾತನಾಡಿ, ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತವನ್ನಾಗಿ ಮಾಡಬೇಕು. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಬೇಕು. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ಜಂಟಿ ನಿರ್ದೇಶಕ ಬಿ.ಎಚ್.ನಿಶ್ಚಲ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕಿ ಡಾ.ಸಿ.ವಿ.ಸ್ನೇಹಾ, ವಕೀಲರ ಸಂಘದ ಅಧ್ಯಕ ಟಿ.ಎಸ್.ಸತ್ಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಆಶಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಇತರರಿದ್ದರು.
ಬಾಲ್ಯವಿವಾಹದ ಬಗ್ಗೆ ಜಾಗೃತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ದೊರಕುವ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ರಾಜ್ಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಜೀವಿನಿ ರಕ್ತ ನಿಧಿ ಕೇಂದ್ರದಿಂದ ರಕ್ತದಾನ ಶಿಬಿರ ಹಾಗೂ ಕಣ್ಣು ಮತ್ತು ದಂತ ಉಚಿತ ತಪಾಸಣೆ ಆಯೋಜಿಸಲಾಗಿತ್ತು.