ಮಂಡ್ಯದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಸ್.ಮಧುಸೂದನ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.  
ಮಂಡ್ಯ

ದೇಶದ ಪ್ರಗತಿಗೆ ಶಿಕ್ಷಣಕ್ಕೆ ಒತ್ತು ನೀಡಲಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಸ್.ಮಧುಸೂದನ್ ಅಭಿಮತ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
  • ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಸ್.ಮಧುಸೂದನ್ ಭಾಗಿ
  • ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನದಿಂದ ಆಯೋಜನೆ
ಮಂಡ್ಯ: ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದರೆ ದೇಶದ ಪ್ರಗತಿಯಾಗುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಎಸ್.ಮಧುಸೂದನ್ ಹೇಳಿದರು.
ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ, ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ, ಕೃಷಿಕ್ ಸರ್ವೋದಯ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಗುಣಮಟ್ಟ ಶಿಕ್ಷಣದ ಪ್ರಾಮುಖ್ಯತೆ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಗುಣಾತ್ಮಕ ಮತ್ತು ಸಮಾನ ಶಿಕ್ಷಣ ಲಭ್ಯವಾಗಬೇಕಿದೆ. ಎಲ್ಲ ಮಕ್ಕಳಿಗೆ ಸಮಾನ ಶಿಕ್ಷಣ ಲಭ್ಯವಾಗುತ್ತಿಲ್ಲ. ರಾಜ್ಯ, ರಾಷ್ಟ್ರ, ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿವಿಧ ಶಿಕ್ಷಣ ಲಭ್ಯವಾಗುತ್ತಿದೆ ಎಂದು ನುಡಿದರು.
ಅನುಭವದ ಕಲಿಕೆ ಮತ್ತು ಪ್ರಾಯೋಗಿಕ ಶಿಕ್ಷಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಗಬೇಕು. ಮೂಲ ಹಂತದಲ್ಲಿಯೇ ನಾವೀನ್ಯತೆ, ಸಮುದಾಯದ ಒಳಗೊಳ್ಳುವಿಕೆಯ ಕೌಶಲಜ್ಞಾನದ ಶಿಕ್ಷಣ ಅತ್ಯಾವಶ್ಯಕ. ಮೈಸೂರಿನ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಮ್ಮ ವಿದ್ಯಾರ್ಥಿಗಳಿಗೆ ವರ್ಚುಯಲ್ ರಿಯಾಲಿಟಿ, ಕೃತಕ ಬುದ್ಧಿಮತ್ತೆ, ರೋಬೊಟಿಕ್‌ನಂತಹ ಆಧುನಿಕ ತಂತ್ರಜ್ಞಾನ, ಪ್ರಯೋಗಾಲಯ, ಡ್ರೋಣ್ ತಯಾರಿಕೆ, ಅಂತರ್ಜಾಲ ಬಳಕೆಯೊಂದಿಗೆ ಶಿಕ್ಷಣ ನೀಡುತ್ತಿದ್ದೇವೆ. ನವೋದಯ ಮಾದರಿ ಶಿಕ್ಷಣ ಎಲ್ಲ ಮಕ್ಕಳಿಗೆ ಸಿಗಲಿ ಎಂದರು.
ಬಿಇಒ ಮಹದೇವು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಲು ಶಿಕ್ಷಕರ ತರಬೇತಿಯಿಂದ ಸಾಧ್ಯವಾಗುತ್ತಿದೆ. ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕು. ಮಾತ್ರವಲ್ಲದೆ ಅವರು ನಿರಂತರ ಹಾಜರಾಗಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಸರ್ಕಾರ ಮತ್ತು ಇಲಾಖೆ ಹಲವಾರು ಯೋಜನೆ ಪೂರೈಸುತ್ತಿದೆ. ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರದ ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುತ್ತಿದೆ. ಸಮಾಜದ ಅಭಿವೃದ್ದಿ ಮತ್ತು ಏಳಿಗೆಗಾಗಿ ಶಿಕ್ಷಣ ಮತ್ತು ಆರೋಗ್ಯ ಒಂದೇ ದೇಹದ ಎರಡು ಕಣ್ಣುಗಳಂತೆ ಭಾವಿಸಿ. ಕೃಷಿಕ್ ಫೌಂಡೇಷನ್‌ನವರು ಮುಂದಿನ ಸಮಾಜವನ್ನು ಉತ್ತಮ ನಿರ್ವಹಣೆಗಾಗಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿಕ್ ಸರ್ವೋದಯ ಫೌಂಡೇಷನ್ ಕಾರ್ಯದರ್ಶಿ ಡಾ.ಬೋರಯ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ.ಪ್ರಕಾಶ್, ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ ಅಧ್ಯಕ್ಷ ಎ.ಸಿ.ರಮೇಶ್, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ, ಕಾರ್ಯಾಗಾರದ ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ, ಶಿಕ್ಷಕ ಮಂಗಲ ಶಿವಣ್ಣ ಇತರರಿದ್ದರು.