ಮಂಡ್ಯ ತಾಲೂಕು ಸಾತನೂರು ಗ್ರಾಮದ ಅಚೀವರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಜಾಜಿನಗರ ಶಾಸಕ ಎಸ್.ಸುರೇಶ್‌ಕುಮಾರ್ ಉದ್ಘಾಟಿಸಿದರು. 
ಮಂಡ್ಯ

ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷ: ರಾಜಾಜಿನಗರ ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ
  • ಸಾತನೂರು ಗ್ರಾಮದ ಅಚೀವರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜನೆ
ಮಂಡ್ಯ: ಭಾರತೀಯ ಜನತಾ ಪಾರ್ಟಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಮಾಜಿ ಸಚಿವ, ರಾಜಾಜಿನಗರ ಶಾಸಕ ಎಸ್.ಸುರೇಶ್‌ಕುಮಾರ್ ಹೇಳಿದರು.
ತಾಲೂಕಿನ ಸಾತನೂರು ಗ್ರಾಮದ ಅಚೀವರ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಅಂಗವಾಗಿ ಆಯೋಜಿಸಿದ್ದ ಮಂಡ್ಯ ನಗರದ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ 1980ರಲ್ಲಿ ಸ್ಥಾಪನೆಯಾಯಿತು. ಕೇವಲ ಎರಡು ಲೋಕಸಭಾ ಸ್ಥಾನಗಳಿಂದ ಪ್ರಾರಂಭವಾಗಿ ಇಂದು ದೇಶದಲ್ಲಿ ಆಡಳಿತ ನಡೆಸುವ ಮಟ್ಟಕ್ಕೆ ಬೆಳೆದು ಬಂದ ಹಾದಿ ರೋಚಕವಾಗಿದೆ ಎಂದರು.
ಬಿಜೆಪಿಯ ಬೇರುಗಳು 1951ರಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನಸಂಘದಲ್ಲಿದೆ. ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯವಾದ ಸಿದ್ಧಾಂತದೊಂದಿಗೆ ಪ್ರಾರಂಭವಾಯಿತು. ಜನತಾ ಪಕ್ಷದ ವಿಭಜನೆಯ ನಂತರ 1980 ಏ.6ರಂದು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದಿತು. 1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿತ್ತು. 1990ರ ದಶಕದಲ್ಲಿ ಎಲ್.ಕೆ.ಅಡ್ವಾಣಿ ಅವರ ’ರಥಯಾತ್ರೆ’ ಮತ್ತು ರಾಮಜನ್ಮ ಭೂಮಿ ಚಳವಳಿಯು ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು. 1996ರಲ್ಲಿ ಮೊದಲ ಬಾರಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ 1998 ಮತ್ತು 1999ರಲ್ಲಿ ಎನ್‌ಡಿಎ ಒಕ್ಕೂಟದ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದರು. 2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿ 282 ಸ್ಥಾನಗಳೊಂದಿಗೆ ಪೂರ್ಣ ಬಹುಮತದ ಸರ್ಕಾರ ರಚಿಸಿತು ಎಂದು ವಿವರಿಸಿದರು.
ಬಿಜೆಪಿ ಮೈಸೂರು ವಿಭಾಗದ ಸಹ ಪ್ರಭಾರಿ ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಬಿಜೆಪಿಯ ಮಹತ್ವ ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ. ಈಗ ಜನರಿಗೆ ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಹೆಚ್ಚಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲಸ ಮಾಡಿಕೊಂಡು ಹೋಗೋಣ. ಬೇರೆ ರಾಜಕೀಯ ಪಕ್ಷಗಳಲ್ಲಿ ಇಂತಹ ಶಿಬಿರಗಳು ನಡೆಯುವುದಿಲ್ಲ. ಪಕ್ಷದ ಉದ್ದೇಶ ತಿಳಿಸುವುದು ಹಾಗೂ ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದನ್ನು ಕಲಿಸಲು ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಅವರ ವಾಣಿಯಂತೆ ಧ್ಯೇಯ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ನಡೆಯೋಣ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ವಿಧಾನ ಪರಿಷತ್, ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುವ ಮಟ್ಟಕ್ಕೆ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡ ಹೋಗೋಣ ಎಂದು ಸಲಹೆ ನೀಡಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಮ್, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್, ನಗರಾಧ್ಯಕ್ಷ ಪ್ರಸನ್ನಕುಮಾರ್, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ಜಿಲ್ಲಾ ಕಾರ್ಯದರ್ಶಿ ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ್, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಆನಂದ್, ಸುನೀಲ್, ನಿತ್ಯಾನಂದ, ಚಂದ್ರು ಇತರರಿದ್ದರು.