ಬಲಮುರಿ ಪ್ರವಾಸಿ ತಾಣದಲ್ಲಿನ ಕಟ್ಟೆಯ ಮೇಲ್ಭಾಗದಲ್ಲಿ ಸುರಕ್ಷತೆ ಇಲ್ಲದೆ ಪ್ರವಾಸಿಗರು ನದಿಯಲ್ಲಿ ಈಜಾಡುತ್ತಿರುವ ಮತ್ತು ನಡೆಯುತ್ತಿರುವ ಹಾಗೂ ಆಟವಾಡುತ್ತಿರುವ ಚಿತ್ರಗಳು.
ಕೆ.ಆರ್.ಸಾಗರ : ಸಾಲು ಸಾಲು ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮತ್ತು ತೀರದ ಪ್ರದೇಶಗಳಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಿ ಶ್ರೀರಂಗಪಟ್ಟಣ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಬೆಳಗೊಳ ಬಳಿ ಇರುವ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಈಜಲು ಮತ್ತು ಆಟವಾಡಲು ಹೋಗಿ ಯುವಕ ಯುವತಿಯರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರಿಗೆ ಇಳಿಯದಂತೆ ನಿಷೇಧ ಹೇರಿ ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನಾ ಯಾದವ್ ಆದೇಶ ಮಾಡಿದ್ದಾರೆ.
2015 ರಿಂದ 79 ಮತ್ತು 2026 ಇಸವಿಯಲ್ಲಿ ಸತತ ನಾಲ್ವರು ಪ್ರವಾಸಿಗರು ಕಾವೇರಿ ನದಿಯಲ್ಲಿ ಮುಳಗಿ ಸಾವನಪ್ಪಿರುವ ಕುರಿತು ಕಳೆದವಾರ ವಿಜಯವಾಣಿ ಸುದ್ದಿ ಪ್ರಕಟಣೆ ಮಾಡಲಾಗಿತ್ತು. ಅಲ್ಲದೇ ಮೂರು ದಿನಗಳ ಹಿಂದೆ ಕ್ರೈಸ್ತ ಧರ್ಮ ಬೋಧನೆ ತರಬೇತಿಗೆಂದು ಬಂದಿದ್ದ ಎಚ್.ಡಿ.ಕೋಟೆ ಮೂಲದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಯಲ್ಲಿ ಆಟವಾಡುವ ಪ್ರವಾಸಿಗರ ಸುರಕ್ಷತೆಗೆ ಯಾರು ಜವಬ್ದಾರಿ, ಅಲ್ಲಿ ನಡೆಯುವ ಸಾವುಗಳಿಗೆ ಯಾರು ಹೊಣೆ ಎಂಬ ಪ್ರಶ್ನೇಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.
ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಮುಳಗಿ ಸಾವನಪ್ಪಿರುವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪೀಳಿಕೆಯವರಾಗಿದ್ದು, ಅನೇಕರು ಸ್ನೇಹಿತರ ಜತೆ, ಕುಟುಂಬದವರ ಜತೆ ಬಂದ ಸಂದರ್ಭದಲ್ಲಿ ಮುಳಗಿ ಸಾನಪ್ಪಿದ್ದು, ಇಲ್ಲಿ ಯಾವುದೇ ಸುರಕ್ಷತೆ ಇರಲಿಲ್ಲ. ಪ್ರವಾಸಿಗರ ಹಿತದೃಷ್ಟಿಯಿಂದ ಕೆ.ಆರ್.ಸಾಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕರು ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಮತ್ತು ತೀರಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಇಳಿಯದಂತೆ ನಿರ್ಬಂಧಿಸುವಂತೆ ವರದಿ ನೀಡಿದ ಹಿನ್ನ್ನೆಲೆಯಲ್ಲಿ ತಹಸೀಲ್ದಾರ್ ಅದೇಶ ಮಾಡಿದ್ದಾರೆ.