ಶ್ರೀ ತೋಪಿನ ತಿಮ್ಮಪ್ಪ (ವೆಂಕಟರಮಣಸ್ವಾಮಿ) ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಿರುವುದು. 
ಮಂಡ್ಯ

ತೋಪಿನ ತಿಮ್ಮಪ್ಪನ ಹರಿಸೇವೆ ಇಂದು

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ನಾಳೆ ಸಹಸ್ರಾರು ಭಕ್ತರಿಗೆ ತಾವರೆ ಎಲೆಯಲ್ಲೇ ಅನ್ನಸಂತರ್ಪಣೆ
ಮದ್ದೂರು: ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದ 850 ವರ್ಷಗಳ ಇತಿಹಾಸವಿರುವ ತೋಪಿನ ತಿಮ್ಮಪ್ಪ (ಶ್ರೀ ವೆಂಕಟರಮಣಸ್ವಾಮಿ) ಹರಿಸೇವೆ ಶನಿವಾರ ಮತ್ತು ಭಾನುವಾರ ಸಂಭ್ರಮದಿಂದ ನೆರವೇರಲಿದೆ.
ರಾಜ್ಯದೆಲ್ಲೆಡೆ ವಿಶಿಷ್ಟ ಆಚರಣೆಯಿಂದ ಮನೆ ಮಾತಾಗಿರುವ ಶ್ರೀ ತೋಪಿನ ತಿಮ್ಮಪ್ಪ (ವೆಂಕಟರಮಣಸ್ವಾಮಿ) ಹರಿಸೇವೆ ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುತ್ತದೆ. ಹರಿಸೇವೆ ಮತ್ತು ಉತ್ಸವಕ್ಕೆ ರಾಜ್ಯದ ನಾನಾ ಕಡೆಯಿಂದ 1ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಾರೆ. ಅಷ್ಟೂ ಜನರಿಗೂ ತಾವರೆ ಎಲೆಯಲ್ಲೇ ಅನ್ನಸಂತರ್ಪಣೆ ನಡೆಯುತ್ತದೆ. ಗ್ರಾಮದ ಪ್ರತಿ ಮನೆಯಿಂದ 10 ಸೇರು ಅಕ್ಕಿ, 2 ಸೇರು ಬೇಳೆ, ಹುಣಸೆ ಹಣ್ಣು, ಕುಂಬಳಕಾಯಿ, ಸೌದೆ, ತೆಂಗಿನಕಾಯಿ, ಬೆಲ್ಲ, ಆರ್ಥಿಕ ಸಹಾಯ ಹಾಗೂ ಹರಕೆ ತೀರಿಸಲು 1ಕಟ್ಟು ತಾವರೆ ಎಲೆ ಸೇರಿದಂತೆ ಇನ್ನಿತರರ ವಸ್ತುಗಳನ್ನು ಕೊಡುವುದು ವಾಡಿಕೆಯಾಗಿದೆ. ಹರಿಸೇವೆ ಉತ್ಸವದಲ್ಲಿ 1ಲಕ್ಷಕ್ಕೂ ಅಧಿಕ ಜನರಿಗೆ ತಾವರೆ ಎಲೆಯಲ್ಲೇ ಅನ್ನಸಂತರ್ಪಣೆ ನಡೆಯುತ್ತದೆ. ಇದಕ್ಕಾಗಿ ಅಬಲವಾಡಿ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಂದ ತಾವರೆ ಎಲೆಗಳನ್ನು ಸಂಗ್ರಹಿಸಲಾಗುತ್ತದೆ.
ಬಂಡಿ ಮೆರವಣಿಗೆ ಸಂಪ್ರದಾಯದಂತೆ ತೋಪಿನ ತಿಮ್ಮಪ್ಪನ ಪತ್ನಿ ಲಕ್ಷ್ಮಿದೇವಿಗೆ ತಾವರೆ ಎಲೆ ಅತ್ಯಂತ ಪ್ರಿಯವಾಗಿರುವುದರಿಂದ ಭಕ್ತರಿಗೆ ತಾವರೆ ಎಲೆ ಊಟ ಬಡಿಸುವುದು ರೂಢಿಯಲ್ಲಿದೆ. ಜು.18ರಂದು ಮಧ್ಯಾಹ್ನ 1 ಗಂಟೆಗೆ ಮಿಸಲು ನೀರು ತರುವುದು, ಮಧ್ಯಾಹ್ನ 2 ಗಂಟೆಗೆ ತಲೆಮುಡಿ, ಸಂಜೆ 3 ಗಂಟೆಗೆ ಮಹಾಮಂಗಳಾರತಿ, ರಾತ್ರಿ 6 ಗಂಟೆಗೆ ಬಂಡಿ ಮೆರವಣಿಗೆ, ರಾತ್ರಿ 12ಗಂಟೆಗೆ ಬಾಯಿಬೀಗ ಮತ್ತು ಜವಳಿ ಕುಣಿತ, ಸೋಮನ ಕುಣಿತ. ಮಂಗಳವಾದ್ಯ, ಮದ್ದಿನ ತಮಾಷೆ ಮತ್ತು ತಮಟೆಗಳೊಂದಿಗೆ ಶ್ರೀ ತೋಪಿನ ತಿಮ್ಮಪ್ಪ, ಶ್ರೀ ಲಕ್ಷ್ಮೀ ದೇವಿ, ಶ್ರೀ ಬಂಕದಕಟ್ಟಮ್ಮ, ಶ್ರೀ ಮದನಟ್ಟಮ್ಮ ದೇವರ ಮೆರವಣಿಗೆ ನಡೆಯಲಿದೆ.
ಜು.19ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಭಕ್ತರಿಗೆ ದೇಗುಲದ ಆವರಣ ಮತ್ತು ಸುತ್ತಲ ಸ್ಥಳದಲ್ಲಿ ತಾವರೆ ಎಲೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಹರಿಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಆಬಲವಾಡಿ ಗ್ರಾಮದ ಮುಖಂಡರು, ಸಂಘ ಸಂಸ್ಥೆಗಳು ಮುಖಂಡರು ಮನವಿ ಮಾಡಿದ್ದಾರೆ.