ಶ್ರೀ ಕರುಮಾರಿಯಮ್ಮ ದೇವಿಯ ಕೊಂಡವನ್ನು ಅರ್ಚಕ ಸಿ.ಮುನಿಸ್ವಾಮಿ ಹಾಯ್ದರು.  
ಮಂಡ್ಯ

ನಾಳೆ ಶ್ರೀ ಕರುಮಾರಿಯಮ್ಮ ಕೊಂಡೋತ್ಸವ

ಮದ್ದೂರು: ಸಮೀಪದ ಚಾಮನಹಳ್ಳಿ ಗ್ರಾಮದ ತಮಿಳು ಕಾಲನಿಯಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಕರುಮಾರಿಯಮ್ಮ ದೇವಿಯ 28ನೇ ವರ್ಷದ ಕೊಂಡೋತ್ಸವ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಸೋಮವಾರ ಬೆಳಗ್ಗೆ ಶಿವಪುರದ ಅರಳಿ ಕಟ್ಟೆಯಿಂದ ದೇವರು ತರಲಾಯಿತು. ಸಂಜೆ ಗಂಟೆಗೆ ಸುಮಂಗಲಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಂಗಳವಾರ ಬೆಳಗ್ಗೆ ಪಿ.ಸೋಮಣ್ಣನವರ ಬಾವಿಯಿಂದ ಮೀಸಲು ನೀರು ತರುವುದು, ಬೆಳಗ್ಗೆ 8.30 ಗಂಟೆಗೆ ಕೊಂಡ ತೆಗೆಯುವುದು, ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ ಅಮ್ಮನವರಿಗೆ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಪಂಚಾಮೃತ ಅಭಿಷೇಕ, ದುರ್ಗಾ ಹೋಮ ನಡೆಯುತ್ತವೆ. ರಾತ್ರಿ 7 ಗಂಟೆಗೆ ಕೊಂಡಾಬಂಡಿ ಉತ್ಸವ ನಡೆಯುತ್ತದೆ. ರಾತ್ರಿ 10.30 ಗಂಟೆಗೆ ಸೌದೆ ಜೋಡಿಸುವುದು ನಂತರ 11.15 ಗಂಟೆಗೆ ಕೊಂಡಕ್ಕೆ ಬೆಂಕಿ ಹತ್ತಿಸುವುದು, ರಾತ್ರಿ 12.45 ಗಂಟೆಗೆ ಶಿವಪುರದ ಕಾಲುವೆಯಲ್ಲಿ ಅಮ್ಮನವರಿಗೆ ಕರಗ ಜೋಡಿಸಲಾಗುವುದು.
ಬುಧವಾರ ಕೊಂಡೋತ್ಸವ:
ಬುಧವಾರ ಬೆಳಗ್ಗೆ 6.30 ಗಂಟೆಗೆ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಬೆಳಗ್ಗೆ 11.30ಕ್ಕೆ ಅಮ್ಮನವರ ಕರಗ ಮೆರವಣಿಗೆ ನಂತರ ಅಂಬಳಿ ಪೂಜೆ ನಡೆಯುತ್ತದೆ. ಸಂಜೆ 6.30ಕ್ಕೆ ತಂಬಿಟ್ಟಿನ ಆರತಿ ಹಾಗೂ ವಿಶೇಷ ಪ್ರಸಾದಗಳ ನೈವೇದ್ಯ ಹಾಗೂ ಪೂಜೆಗಳು ನಡೆಯುತ್ತವೆ.
ಗುರುವಾರ ಬೆಳಗ್ಗೆ 10.30 ರಿಂದ 11.30 ರವರೆಗೆ ಸಲ್ಲುವ ಶುಭ ಘಳಿಗೆಯಲ್ಲಿ ಉತ್ಸವ ಮೂರ್ತಿಯ ಅರಿಶಿಣ, ನೀರಿನ ಓಕುಳಿ ಪೂಜೆ ನಡೆಯಲಿದೆ. ನಂತರ ಕರಗ ಮೆರವಣಿಗೆ ಬಂದು ಗಂಗೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಸೋಮವಾರದಿಂದ ಗುರುವಾರದವರೆಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇಗುಲ ಅರ್ಚಕ ಸಿ.ಮುನಿಸ್ವಾಮಿ, ತಂಗವೇಲು, ರಾಜು, ಮುನಿಸ್ವಾಮಿ ಹಾಗೂ ಚಾಮನಹಳ್ಳಿ ಸೇರಿದಂತೆ ಅಕ್ಕಪಕ್ಕ ಗ್ರಾಮಸ್ಥರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಶ್ರೀ ಕರುಮಾರಿಯಮ್ಮ ಅತ್ಯಂತ ಶಕ್ತಿಶಾಲಿ ದೇವಿಯಾಗಿದ್ದು ಪ್ರತಿ ವರ್ಷದಂತೆ ಈ ವರ್ಷವೂ ಕೊಂಡೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಭಕ್ತರ ಅಪಾರ ನಂಬಿಕೆ ಎನ್ನುತ್ತಾರೆ ದೇಗುಲದ ಅರ್ಚಕ ಸಿ.ಮನಿಸ್ವಾಮಿ.