ಸಂಜೀವಿನ ಮಾಸಿಕ ಸಂತೆಯಲ್ಲಿ ಪದಾರ್ಥಗಳನ್ನು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ವೀಕ್ಷಿಸಿದರು.  
ಮಂಡ್ಯ

ಸಂಜೀವಿನಿ ಮಾಸಿಕ ಸಂತೆ ಸದುಪಯೋಗಕ್ಕೆ ಸಲಹೆ

ಹಲಗೂರು: ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವುದು. ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಜೀವಿನಿ ಮಾಸಿಕ ಸಂತೆ ಆಯೋಜಿಸಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಜಿ.ಶ್ರೀನಿವಾಸ್ ಕರೆ ನೀಡಿದರು.
ಸಮೀಪದ ಹಾಡ್ಲಿ- ಮೇಗಳಾಪುರ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಮಂಡ್ಯ ಜಿಲ್ಲಾ ಪಂಚಾಯಿತಿ ಮತ್ತು ಹಾಡ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಜೀವಿನಿ ಒಕ್ಕೂಟದ ಸದಸ್ಯರ ಆದಾಯ ಹೆಚ್ಚಿಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮಾಸಿಕ ಸಂತೆಯ ಪ್ರಮುಖ ಉದ್ದೇಶ. ಒಂದು ಕುಟುಂಬ ಅಭಿವೃದ್ಧಿ ಆಗಬೇಕಾದರೆ ಮಹಿಳೆಯ ಪಾಲು ಅಗತ್ಯವಾಗಿದ್ದು, ಮಹಿಳೆಯರ ಬೆನ್ನೆಲುಬಾಗಿ ನಿಲ್ಲುವ ಕಾರ್ಯವನ್ನು ಸಂಜೀವಿನಿ ಮಾಡುತ್ತಿದೆ. ನೆರೆಹೊರೆಯ ಮಹಿಳೆಯರು ಹಲವು ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಪರಸ್ಪರ ವ್ಯಾಪಾರ ಮಾಡುವ ಜತೆಗೆ ಅಕ್ಕಪಕ್ಕದ ಪರಿಚಿತ ಕುಟುಂಬಗಳಿಗೂ ಸಂಜೀವಿನಿ ಬಗ್ಗೆ ತಿಳಿಸಬೇಕು ಎಂದರು.
ಮಳಿಗೆಯಲ್ಲಿ ಭರ್ಜರಿ ವಹಿವಾಟು:
ಸಂಜೀವಿನಿ ವತಿಯಿಂದ ಗುರುವಾರ ಆಯೋಜಿಸಿದ್ದ ಮಾಸಿಕ ಸಂತೆಯಲ್ಲಿ 28ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಸಿರಿಧಾನ್ಯ, ಮಸಾಲೆ ಪುಡಿ, ಉಪ್ಪಿನಕಾಯಿ, ಹಪ್ಪಳ, ಚಕ್ಕುಲಿ, ಕೈಮಗ್ಗ ಸೀರೆಗಳು ವಸಗಳು, ಸಾವಯವ ತರಕಾರಿ, ಗೃಹೋಪಯೋಗಿ ವಸ್ತುಗಳು ಮಾರಾಟವಾದವು. ಸಾವಯವ ರಾಗಿ ಹುರಿ ಹಿಟ್ಟು, ನುಗ್ಗೆಸೊಪ್ಪು ಕರಿಬೇವಿನ ಸೊಪ್ಪಿನ ಪುಡಿಗಳು ಗಮನ ಸೆಳೆದವು. ವಿವಿಧ ಗ್ರಾಮ ಗಳಿಂದ ಸಂತೆಗೆ ಬಂದಿದ್ದ ಗ್ರಾಹಕರಿಂದ ಬಜ್ಜಿ, ಬೋಂಡ, ಮಸಾಲ ವಡೆ ಭರ್ಜರಿ ವಹಿವಾಟು ನಡೆಯಿತು.
ಹಾಡ್ಲಿ ಗ್ರಾಮ ಪಂಚಾಯಿತಿ ಪಿಡಿಒ ಲಿಂಗರಾಜು, ಒಕ್ಕೂಟದ ಅಧ್ಯಕ್ಷೆ ಸುನಂದಮ್ಮ, ಕಾರ್ಯದರ್ಶಿ ಸವಿತಾ, ಖಜಾಂಚಿ ಲಕ್ಷ್ಮೀ, ವ್ಯವಸ್ಥಾಪಕ ಮಹದೇವಸ್ವಾಮಿ, ಕೃಷಿ ಅಧಾರಿತ ಚಟುವಟಿಕೆ ಸಂಯೋಜಕ ಕೃಷ್ಣ, ಒಕ್ಕೂಟದ ಮಧುಶ್ರೀ, ಗಿರಿಜಾ, ಪ್ರೇಮಾ, ರತ್ನಮ್ಮ, ಮಮತ ಸೇರಿದಂತೆ ಹಲವರು ಭಾಗವಹಿಸಿದ್ದರು.