ಮಂಡ್ಯದಲ್ಲಿ ಆಯೋಜಿಸಿದ್ದ ತ್ಯಾಗರಾಜಸ್ವಾಮಿ ಆರಾಧನಾ ಮಹೋತ್ಸವದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.  
ಮಂಡ್ಯ

ಸಮುದಾಯ ಭವನ ಕಟ್ಟಲು ಆರ್ಥಿಕ ನೆರವು: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ತ್ಯಾಗರಾಜಸ್ವಾಮಿ 7ನೇ ವರ್ಷದ ಆರಾಧನಾ ಮಹೋತ್ಸವ
  • ಅರ್ಕೇಶ್ವರ ದೇವಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ
  • ಮಂಗಳವಾದ್ಯ ಕಲಾವಿದರ ಸಂಘದಿಂದ ಆಯೋಜನೆ
ಮಂಡ್ಯ: ಸವಿತಾ ಸಮುದಾಯ ಭವನ ಕಟ್ಟಲು ಅನುದಾನ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಅರ್ಕೇಶ್ವರ ಬಡಾವಣೆಯಲ್ಲಿರುವ ಅರ್ಕೇಶ್ವರ ದೇವಾಲಯದ ಸಭಾಂಗಣದಲ್ಲಿ ಕಲಾವಿದರ ಸಂಘ, ಜಿಲ್ಲಾ ಸವಿತಾ ಸಮಾಜದ ಬಂಧುಗಳು, ತ್ಯಾಗರಾಜಸ್ವಾಮಿ ಆರಾಧನಾ ಬಳಗ ಆಯೋಜಿಸಿದ್ದ ತ್ಯಾಗರಾಜಸ್ವಾಮಿ 7ನೇ ವರ್ಷದ ಆರಾಧನಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಎಲ್ಲ ಸಮುದಾಯಗಳ ಭವನ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಗಂಗಾಮತಸ್ಥ ಸಮುದಾಯ ಭವನಕ್ಕೆ 25 ಲಕ್ಷ ರೂ, ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಬರುದರಿಂದ ಎಲ್ಲಾ ಸಮುದಾಯಗಳ ಭವನಗಳು ಇಲ್ಲಿಯೇ ಆಗಬೇಕು ಎನ್ನುವ ಬೇಡಿಕೆ, ಒತ್ತಡ ಹೆಚ್ಚಿದೆ ಎಂದು ತಿಳಿಸಿದರು.
ಜಿಲ್ಲಾ ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ, ಬಸರಾಳಿಗೆ 25 ಲಕ್ಷ ರೂ, ಉಮ್ಮಡಹಳ್ಳಿಗೆ 25 ಲಕ್ಷ ರೂ, ಕನಕದಾಸರ ಕನಕಧಾಮ ನಿರ್ಮಾಣಕ್ಕೆ 1 ಕೋಟಿ ರೂ ನೀಡಲಾಗಿದೆ. ಲಿಂಗಾಯತ ಸಮುದಾಯ ಭವನಕ್ಕೆ 1 ಕೋಟಿ ರೂ, ಅಂಬೇಡ್ಕರ್ ಭವನಗಳಿಗೂ ಬಿಡುಗಡೆ ಮಾಡಲಾಗಿದೆ. ಸಣ್ಣ ಸಣ್ಣ ಸಮುದಾಯಗಳ ಮುಖಂಡರನ್ನು ಗುರುತಿಸಿ, ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದರು.
ಸವಿತಾ ಸಮುದಾಯ ಭವನ ಕಟ್ಟಲು ಮುಡಾ ನಿವೇಶನ ಇಲ್ಲ. ನಗರ ವಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ. ನಗರದಿಂದ ದೂರ ನಿವೇಶನಗಳು ಸಿಗುತ್ತವೆ. ಅಲ್ಲಿ ಕಟ್ಟಲು ಒಮ್ಮತದ ಸಹಕಾರ ನೀಡಿದರೆ ನಾನು ಸಿದ್ದವಿದ್ದೇನೆ. ಶಾಲೆ ಕಟ್ಟಲು ಮನವಿ ಬಂದಿದೆ, ಮೊದಲು ಮುಡಾ ಕಚೇರಿಗೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ನಂತರ ತೀರ್ಮಾನ ಮಾಡೋಣ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್, ಬಿಜೆಪಿ ಯುವ ಮುಖಂಡ ಸಚ್ಚಿದಾನಂದ ಇಂಡುವಾಳು, ರಾಜ್ಯ ಸವಿತಾ ಸಮಾಜ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಮುತ್ತುರಾಜ್, ಉದ್ಯಮಿ ನಾಮದೇವ್ ನಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ.ಸದಾನಂದ, ಮಂಗಳವಾದ್ಯ ಕಲಾವಿದರ ಸಂಘದ ಮಾಜಿ ಅಧ್ಯಕ್ಷ ಎಂ.ಎನ್.ಸಂತೋಷ್, ಎಂ.ಪಿ.ಗಣೇಶ್, ಅಧ್ಯಕ್ಷ ವೈ.ಎಸ್.ಸುರೇಶ್, ಯೋಗೇಶ್, ಪ್ರತಾಪ್, ಜಯರಾಂ, ಸೋಮಶೇಖರ್, ನಗರಸಭಾ ಮಾಜಿ ಸದಸ್ಯ ಚಂದ್ರು ಇತರರಿದ್ದರು.
ಇದೇ ಸಂದರ್ಭದಲ್ಲಿ ಗುತ್ತಲು ಮತ್ತು ಅರ್ಕೇಶ್ವರ ಬಡಾವಣೆಯ ರಾಜಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಅರ್ಕೇಶ್ವರ ಉತ್ಸವ ನಡೆಯಿತು. ದೇಶ, ವಿದೇಶ ಹಾಗೂ ಸಿನಿಮಾ ನಟರು ಮತ್ತು ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಅನ್ನದಾಸೋಹ ನಡೆಯಿತು.