ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ)ಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿದರು. ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ, ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ, ಪ್ರಾಂಶುಪಾಲ ಪ್ರೊ.ಗುರುರಾಜ್ ಕೆ.ಪ್ರಭು, ಪ್ರೊ.ಎಚ್.ಕೃಷ್ಣೇಗೌಡ, ಡಾ.ಎಸ್.ಶಿವರಾಮು, ಡಾ.ಕೆ.ಎಂ.ಕವಿತಾ, ಟಿ.ಎನ್.ಶಾಂತರಾಜು ಇತರರಿದ್ದರು.
ಮಂಡ್ಯ:ಇತಿಹಾಸವನ್ನು ಉಳಿಸಲು ದಾಖಲೆಗಳು ಬಹಳ ಮುಖ್ಯ. ಒಂದು ವೇಳೆ ದಾಖಲೆಗಳು ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಸಾಧ್ಯವಿಲ್ಲ. ಆದ್ದರಿಂದ ದಾಖಲೆಗಳು ಇತಿಹಾಸವನ್ನು ಉಳಿಸುತ್ತವೆ ಎಂದರೆ ತಪ್ಪಾಗುವುದಿಲ್ಲ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ)ಪತ್ರಾಗಾರ ಇಲಾಖೆ ವಿಭಾಗೀಯ ಕಚೇರಿ ಮೈಸೂರು, ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನದ ಐತಿಹಾಸಿಕ ದಾಖಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಇತಿಹಾಸಕ್ಕೆ ಸಂಬಂಧಪಟ್ಟಂತಹ ಪ್ರತಿ ಕಾರ್ಯಕ್ರಮಗಳು ಅರ್ಥಗರ್ಭಿತವಾಗಿವೆ. ಐತಿಹಾಸಿಕ ದಾಖಲೆಗಳ ಮತ್ತು ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಮಂಡ್ಯದ ಐತಿಹಾಸಿಕ ಇತಿಹಾಸ, ಪರಂಪರೆ ಹಾಗೂ ಮೈಸೂರು ಸಂಸ್ಥಾನದ ಇತಿಹಾಸ ತಿಳಿದುಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳಾಗಿ ಇತಿಹಾಸದ ದಾಖಲೆಗಳನ್ನು ಕಲೆಹಾಕುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
ಭಾರತ ದೇಶದ ಸಂಸ್ಕೃತಿ, ಇತಿಹಾಸ, ಸಂಪ್ರದಾಯ ಬಹಳ ವಿಶಿಷ್ಟವಾದದ್ದಾಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ಮೈಸೂರಿನ ಸಂಸ್ಕೃತಿ ಪ್ರಸಿದ್ಧವಾದದ್ದು. ಆದರೆ ಪ್ರಸ್ತುತ ಪೀಳಿಗೆಗಳು ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿ, ಆಚಾರ-ವಿಚಾರದ ಕಡೆಗೆ ಗಮನಹರಿಸುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೇರೆ ದೇಶದ ಪ್ರವಾಸಿಗರು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗುತ್ತಿರುವ ಸಂದರ್ಭದಲ್ಲಿ ಭಾರತದ ನಿವಾಸಿಗಳು ನಮ್ಮ ದೇಶದ ಸಂಸ್ಕೃತಿಯನ್ನು ಮರೆಯುತ್ತಿರುವುದು ಸಮಂಜಸವಲ್ಲ. ಪಾಶ್ಚಿಮಾತ್ಯ ಭಾಷೆ ಕಲಿಯಿರಿ. ಆದರೆ, ನಿಮ್ಮ ದೇಶದ ಇತಿಹಾಸ, ಸಂಸ್ಕೃತಿ ಮರೆಯದಿರಿ ಎಂದು ಹೇಳಿದರು.
ವಿದ್ಯಾರ್ಥಿಗಳಾಗಿ ಜೀವನ ಮೌಲ್ಯಗಳನ್ನು ತಿಳಿದು ಮುಂದಿನ ನಿಮ್ಮ ಜೀವನದ ಇತಿಹಾಸವನ್ನು ನೀವೇ ಸೃಷ್ಟಿಸಿ. ಶಿಕ್ಷಣದಿಂದ ಅನೇಕ ವೇದಿಕೆ ಮತ್ತು ಅವಕಾಶಗಳು ದೊರೆಯುತ್ತದೆ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವಹಿಸಿ ಹಾಗೂ ಅಂಕ ಗಳಿಸುವುದರ ಜತೆಗೆ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಮಾತನಾಡಿ, ದಾಖಲೆಗಳು ಕೇವಲ ಇತಿಹಾಸ ವಿದ್ಯಾರ್ಥಿಗಳಿಗೆ ಸೀಮಿತವಾದುದಲ್ಲ. ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಹಾಗೂ ಶಿಕ್ಷಣಕ್ಕಾಗಿ ದಾಖಲೆಗಳ ಅವಶ್ಯಕತೆ ಇದೆ. ದಾಖಲೆ ಕಳೆದುಕೊಂಡರೆ ಇತಿಹಾಸ ಕಳೆದುಕೊಂಡಂತೆ ಹಾಗೂ ದಾಖಲೆಗಳಿಂದ ಕಳೆದು ಹೋದ ಇತಿಹಾಸವನ್ನು ಮರು ಸೃಷ್ಟಿಸಬಹುದು ಎಂದು ಇತಿಹಾಸದ ದಾಖಲೆಗಳ ಮಹತ್ವ ತಿಳಿಸಿದರು.
ಇತಿಹಾಸ ಕೇವಲ ಮರಣ ಹೊಂದಿದವರ ಕಥೆಯೆಂದು ಭಾವಿಸದೆ ಜೀವಂತ ಪ್ರವಾಸ ಎಂದು ತಿಳಿಯಿರಿ. ಇತಿಹಾಸ ಎಷ್ಟು ಓದಿದರೂ ಮುಗಿಯದೆ ಇರುವಂತಹದ್ದು. ಪ್ರತಿಯೊಬ್ಬರೂ ಇತಿಹಾಸವನ್ನು ಅರಿತುಕೊಳ್ಳಬೇಕು ಎಂದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ಪ್ರೊ.ಗುರುರಾಜ್ ಕೆ.ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಕೃಷ್ಣೇಗೌಡ, ಸಹ ಪ್ರಾಧ್ಯಾಪಕರಾದ ಡಾ.ಎಸ್.ಶಿವರಾಮು, ಡಾ.ಕೆ.ಎಂ.ಕವಿತಾ, ಟಿ.ಎನ್.ಶಾಂತರಾಜು ಇತರರಿದ್ದರು.
130ಕ್ಕೂ ಹೆಚ್ಚು ದಾಖಲೆಗಳ ಅನಾವರಣ: ಮೂರು ದಿನದ ಪ್ರದರ್ಶನದಲ್ಲಿ ಅಪರೂಪದ ಐತಿಹಾಸಿಕ ದಾಖಲೆ ಮತ್ತು ಛಾಯಾಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದು. 1902ರಲ್ಲಿ ಕಾವೇರಿ ಜಲ ವಿದ್ಯುತ್ ಯೋಜನೆಯನ್ನು ಬ್ರಿಟಿಷ್ ರೆಸಿಡೆಂಟರು ವೀಕ್ಷಣೆ ಮಾಡಿದ್ದ ವರದಿ, 1929ರಲ್ಲಿ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಪ್ರಯಾಣಿಸುವ ವಾಹನಕ್ಕೆ ಟೋಲ್ ದರ ನಿಗದಿಪಡಿಸಿದ್ದ ಆದೇಶ, ಕೆಆರ್‌ಎಸ್ ಅಣೆಕಟ್ಟೆ ಹಾಗೂ ಪೂರಕ ಕಾಮಗಾರಿಗಳ ವಿವರ, 1934ರಲ್ಲಿ ಶ್ರೀರಂಗಪಟ್ಟಣ ತಾಲೂಕು ಕರಿಘಟ್ಟದ ವೆಂಕಟರಮಣಸ್ವಾಮಿ ರಥೋತ್ಸವದ ಆಹ್ವಾನ ಪತ್ರಿಕೆ, 1938ರಲ್ಲಿ ಮೈಷುಗರ್ ಕಾರ್ಖಾನೆ ಕಬ್ಬಿಗೆ ಕನಿಷ್ಠ ಬೆಲೆ ನಿರ್ಧರಿಸಿದ ಆದೇಶ, ಶಿವಪುರ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ಮಹಿಳಾ ಸ್ವಾತಂತ್ರೃ ಹೋರಾಟಗಾರ್ತಿಯರ ಕುರಿತ ವರದಿ, ಜಯಚಾಮರಾಜೇಂದ್ರ ಒಡೆಯರ್ ಅವರು ಶಿಂಷಾ ನದಿ ಸೇತುವೆ ಉದ್ಘಾಟಿಸಿದ್ದು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಿದ್ದ ಆದೇಶ, ಜಿಲ್ಲೆಯ ಸ್ವಾತಂತ್ರೃ ಹೋರಾಟಗಾರರ ವಿವರ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಮತ್ತು ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ, ಮೈಸೂರಿನ ಹಳೇ ಅರಮನೆಯ ದಸರಾ ಕಲಾಪ ಸೇರಿದಂತೆ ಹಲವು ಮಹತ್ವದ 130ಕ್ಕೂ ಹೆಚ್ಚು ದಾಖಲೆಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.