ಕಿಕ್ಕೇರಿ ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ಪೀಠದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯ ಜರುಗಿತು. ರುದ್ರಮುನಿ ಸ್ವಾಮೀಜಿ, ಆರ್‌ಟಿಒ ಮಲ್ಲಿಕಾರ್ಜುನ ಮತ್ತಿತರರಿದ್ದರು.  
ಮಂಡ್ಯ

ದೇವರ ಆರಾಧನೆಯಲ್ಲಿ ನೆಮ್ಮದಿ ಇದೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಪಂಚಭೂತೇಶ್ವರ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಹೇಳಿಕೆ
ಕಿಕ್ಕೇರಿ: ದೇವರನ್ನು ಶಾಂತಚಿತ್ತದಿಂದ ಆರಾಧಿಸಿದರೆ ಒಳಿತು ಖಚಿತವಾಗಿ ಸಿಗಲಿದ್ದು ಕಾಯುವ ವ್ಯವಧಾನ ರೂಢಿಸಿಕೊಳ್ಳಬೇಕಿದೆ ಎಂದು ಬೆಡದಹಳ್ಳಿ ಪಂಚಭೂತೇಶ್ವರ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ಸಮೀಪದ ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಇತ್ತೀಚೆಗೆ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗರಣೆ, ಉಪವಾಸ, ಭಜನೆ, ಹೋಮ ಪ್ರತಿಯೊಂದರಲ್ಲೂ ತನ್ನದೇ ಸಕಾರಾತ್ಮಕ ಶಕ್ತಿ ಇದೆ. ವೈಜ್ಞಾನಿಕ ಹಿನ್ನೆಲೆಯಲ್ಲಿಯೂ ಇಂತಹ ಕೈಂಕರ್ಯಗಳು ಸಮಾಜಕ್ಕೆ ಆರೋಗ್ಯಕರವಾಗಿದೆ. ಬುದ್ಧಿವಿಕಲ್ಪತೆ ಸ್ವಾರ್ಥದಿಂದ ಬರಲಿದ್ದು, ಇಂತಹ ಮನೋವಿಕಲ್ಪ ದೂರವಾಗಲು ಸಾತ್ವಿಕ ಗುಣ ಪಡೆಯಲು ದೇವತಾರಾಧನೆ ಸರ್ವಶ್ರೇಷ್ಠವಾಗಿದೆ ಎಂದರು.
ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ದೇವ, ದೈವತ್ವ ನಂಬಿ ಬದುಕಿದರೆ ಬದುಕು ಸುಂದರವಾಗಲಿದೆ. ದಿನದ ಒಂದಿಷ್ಟು ಧ್ಯಾನ, ಪೂಜಾರಾಧನೆಗೆ ಮೀಸಲಿಟ್ಟರೆ ಶಾಂತಿ ನೆಮ್ಮದಿ ಸಿಗಲಿದೆ. ಪಂಚಭೂತೇಶ್ವರ ಪೀಠ ಎಡವಿದವರಿಗೆ ಮೇಲೆತ್ತಿ ತಿದ್ದುವ ಪ್ರಕೃತಿ ಮಡಿಲುನಲ್ಲಿರುವ ಗುರುಪೀಠದಂತಿದೆ. ಒತ್ತಡದ ಬದುಕಿನ ಜಂಜಾಟಕ್ಕೆ ಮುಕ್ತಿ ನೀಡಲು ಪರಮಾತ್ಮ ಪ್ರೇರಣೆ ನೀಡುವ ತಾಣದಂತಿದೆ. ಇಲ್ಲಿನ ಸಾಮಾಜಿಕ ಕೈಂಕರ್ಯ ಮಾದರಿಯಾಗಿದೆ ಎಂದರು. ಸುತ್ತಮುತ್ತಲ ಗ್ರಾಮದ ಭಕ್ತರು ಭಾಗವಹಿಸಿದ್ದರು.