ಮಂಡ್ಯ ನಗರದಲ್ಲಿ ಆಯೋಜಿಸಿದ್ದ ತತ್ವಪದ ಗಾಯನ ಕಾರ್ಯಕ್ರಮವನ್ನು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಉದ್ಘಾಟಿಸಿದರು.  
ಮಂಡ್ಯ

ಹಿರಿಯ ಮನಸ್ಸುಗಳಿಂದ ಹುಟ್ಟಿಕೊಂಡಿರುವ ತತ್ವಪದ: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಕನ್ನಡದ ತತ್ವಪದಗಳು ಆಧ್ಯಾತ್ಮಿಕ ಚಿಂತನೆಯ ಮಹೋನ್ನತ ಸಾಹಿತ್ಯ ಪ್ರಕಾರವಾದ ತತ್ವಪದ ಹಿರಿಯ ಮನಸ್ಸುಗಳಿಂದ ಹುಟ್ಟಿಕೊಂಡಿವೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಸೇವಾಕಿರಣ ವೃದ್ಧಾಶ್ರಮದ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕದಿಂದ ಆಯೋಜಿಸಿದ್ದ ತತ್ವಪದ ಗಾಯನ ಮತ್ತು ವಯೋವೃದ್ಧರಿಗೆ ಪೌಷ್ಟಿಕಾಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಸಾಹಿತ್ಯದ ಪ್ರಕಾರಗಳಲ್ಲಿ ತತ್ವಪದವು ಒಂದು. ವಚನ ಸಾಹಿತ್ಯದಂತೆ ತತ್ವಪದಗಳನ್ನು ಸ್ವರ-ಲಯವಾಗಿ ಹಾಡುವ ಉತ್ತಮ ಗಾಯಕರು ನಮ್ಮ ನಡುವೆ ಇದ್ದಾರೆ. ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ತತ್ವಪದಗಾರರಿಂದ ಸಾಕಷ್ಟು ಹಾಡುಗಳನ್ನು ಕೇಳುತ್ತಿದ್ದರು. ಜತೆಗೆ ಅವರಿಗೆ ಆಸರೆಯಾಗಿ ನಿಲ್ಲುತ್ತಿದ್ದರು. ನಮ್ಮ ಕುಟುಂಬಸ್ಥರು ತತ್ವಪದಗಾರರನ್ನು ಮನೆಗೆ ಕರೆಸಿ ಹಾಡಿಸುತ್ತಿದ್ದರು ಎಂದರು.
ಎನ್.ವೈ.ಕೆ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು ಮಾತನಾಡಿ, ಕನ್ನಡ ಸಾಹಿತ್ಯದ ಅತ್ಯಂತ ಶ್ರೀಮಂತ ಹಾಗೂ ಲೋಕಜ್ಞಾನದ ಗಣಿಯಾಗಿರುವ ’ತತ್ವಪದಗಳು’ ಮತ್ತು ಅವುಗಳ ಸಾಮಾಜಿಕ ಮಹತ್ವದ ಅರಿವು ಇಂದಿನ ಯುವಪೀಳಿಗೆ ಬೆಳೆಸಬೇಕಿದೆ. ಜಟಿಲವಾದ ವೇದಾಂತ ಮತ್ತು ಅಧ್ಯಾತ್ಮದ ಸತ್ಯಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಹಾಡಿನ ರೂಪದಲ್ಲಿ ಕಟ್ಟಿಕೊಟ್ಟಿರುವುದೇ ತತ್ವಪದ ಎಂದು ತಿಳಿಸಿದರು.
ವೈದ್ಯ ಡಾ.ಎಚ್.ಸಿ.ಆನಂದ್ ಮಾತನಾಡಿ, ಸಂಸ್ಕೃತದ ಕ್ಲಿಷ್ಟ ಪದಗಳನ್ನು ಬಳಸದೇ ಹಳ್ಳಿಗರ ಆಡುಭಾಷೆಯಲ್ಲಿ ಬದುಕಿನ ಪರಮ ಸತ್ಯವನ್ನು ತತ್ವಪದಗಳು ದಾಟಿಸುತ್ತವೆ. ಶರೀರವೇ ದೇಗುಲ ಎನ್ನುವ ಸಂದೇಶವಿದೆ, ಮಾನವನ ದೇಹವನ್ನೇ ಮುಖ್ಯ ನೆಲೆಯಾಗಿಟ್ಟುಕೊಂಡು, ಶರೀರದ ಒಳಗಿನ ಆಧ್ಯಾತ್ಮಿಕ ಅರಿವನ್ನು ಜಾಗೃತಗೊಳಿಸುವುದು ಇದರ ಮುಖ್ಯ ಆಶಯ ಎಂದು ತಿಳಿಸಿದರು.
ಕಸ್ತೂರಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಪೋತೇರ ಮಹದೇವು, ನಿವೃತ್ತ ಶಿಕ್ಷಕ ಎ.ನಾಗರಾಜು, ಹುಲಿವಾನ ಎ.ಶಿವಣ್ಣ, ಜಾನಪದ ಸಾಹಿತಿ ಕೆ.ಪಿ.ವೀರಪ್ಪ ಕೀಲಾರ, ಸಿ.ಜೆ.ಸುಜಾತಾಕೃಷ್ಣ, ವಸಂತಾ ನಾಗಲಿಂಗೇಗೌಡ, ಎಚ್.ಜೆ.ಲೀಲಾವತಿ, ರಾಜಣ್ಣ ಮತ್ತಿತರರಿದ್ದರು. ಇದೇ ವೇಳೆ ಶಿವಾನಂದ ಕೀಲಾರ ತಂಡದವರು ತತ್ವಪದಗಳನ್ನು ಹಾಡಿ ರಂಜಿಸಿದರು. ವಯೋವೃದ್ಧರಿಗೆ ಪೌಷ್ಟಿಕಾಹಾರ ಮತ್ತು ಹಣ್ಣ-ಹಂಪಲು ವಿತರಿಸಲಾಯಿತು.