ಕೊನ್ಮಾಪುರ ದೊಡ್ಡಿ ಗೇಟ್‌ಗೆ ವಲಯ ಅರಣ್ಯಧಿಕಾರಿ ಪ್ರಮೋದ್‌ಕುಮಾರ್ ದೇವ್ ಭೇಟಿ ನೀಡಿ ಪರಿಶೀಲಿಸಿದರು.
- ಕೊನ್ಮಾಪುರ ದೊಡ್ಡಿ ಗೇಟ್
- ಕಾಡಾನೆಗಳ ಹಾವಳಿ ತಡೆಯಲು
ಹಲಗೂರು: ಕಾಡಾನೆಗಳ ಹಾವಳಿ ತಡೆಯಲು ಸಮೀಪದ ಕೊನ್ಮಾಪುರ ದೊಡ್ಡಿ ಗೇಟ್ ಬಳಿ ಅಳವಡಿಸಿದ್ದ ಎರಡು ಸೋಲಾರ್ ಬ್ಯಾಟರಿಗಳನ್ನು ಕಳ್ಳರು ಭಾನುವಾರ ತಡರಾತ್ರಿ ಕದೊಯ್ದಿದ್ದಾರೆ.
ಕಾಡಾನೆಗಳು ಮತ್ತು ಕಾಡುಪ್ರಾಣಿಗಳು ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳತ್ತ ಬಂದಾಗ ಅವುಗಳನ್ನು ತಡೆಗಟ್ಟಲು ಕಾವೇರಿ ವನ್ಯಜೀವಿ ವಲಯದ ಶಿಂಷಾ ಶಾಖೆಯ ತಾಳವಾಡಿ ಗಸ್ತಿನಲ್ಲಿ ಸೋಲಾರ್ ಟೆಂಟ್ ಕಲ್ ಬೇಲಿ ಹಾಕಲಾಗಿದ್ದು, ಇದಕ್ಕಾಗಿ ಎರಡು ಸೋಲಾರ್ ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಇದೀಗ ಕಳ್ಳರು ಸೋಲಾರ್ ಬ್ಯಾಟರಿಗಳಿದ್ದ ಪೆಟ್ಟಿಗೆಗಳನ್ನು ಒಡೆದು ಕಳವು ಮಾಡಿದ್ದಾರೆ.
ಕಾವೇರಿ ವನ್ಯಜೀವಿ ವಲಯದ ಹಲಗೂರು ವಲಯ ಅರಣ್ಯಾಧಿಕಾರಿ ಪ್ರಮೋದ್‌ಕುಮಾರ್ ದೇವ್ ಮಾತನಾಡಿ, ಮುತ್ತತ್ತಿ ಬಸವನ ಬೆಟ್ಟ ದಟ್ಟ ಅರಣ್ಯವಾಗಿದ್ದು, ಹೆಚ್ಚು ಕಾಡುಪ್ರಾಣಿಗಳಿವೆ. ಕಾಡು ಪ್ರಾಣಿಗಳಿಂದ ಜನರು ಮತ್ತು ಬೆಳೆಗಳನ್ನು ರಕ್ಷಣೆ ಮಾಡಲು ಅರಣ್ಯ ವಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಲಾರ್ ಟೆಂಟ್ ಬೇಲಿ ಅಳವಡಿಸಿ, ಅಗತ್ಯವಿರುವ ಬ್ಯಾಟರಿಗಳನ್ನು ಕೆಲವು ನಿರ್ದಿಷ್ಟ ಪಡಿಸಲಾದ ಸ್ಥಳದಲ್ಲಿ ಇಡಲಾಗಿತ್ತು. ಇಂತಹ ಬ್ಯಾಟರಿಗಳನ್ನು ಕಳವು ಮಾಡಿರುವುದು ಬೇಸರದ ವಿಚಾರ. ಜನರ ರಕ್ಷಣೆಗೆ ಅರಣ್ಯ ಇಲಾಖೆ ಸಿದ್ಧವಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಈ ಸಂಬಂಧ ಹಲಗೂರು ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.