ವಿವಿಧ ದೇವಾಲಯಗಳಲ್ಲಿ ಕಳ್ಳತನ 
ಮಂಡ್ಯ

ವಿವಿಧ ದೇವಾಲಯಗಳಲ್ಲಿ ಕಳ್ಳತನ

ಲೋಕೇಶ್ ಮನು. ಡಿ
ಹಲಗೂರು: ಸಮೀಪದ ವಿವಿಧ ಗ್ರಾಮಗಳ ವಿವಿಧ ದೇವಾಲಯಗಳಿಗೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ.
ಹಲಗೂರು ಸಮೀಪದ ಕುಂತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಬ್ಬಾಳಮ್ಮ ದೇವಾಲಯದ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ದೇವಿಗೆ ಹಾಕಿದ್ದ 9 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳ ಕಳವು ಮಾಡಿದ್ದಾರೆ. ಅಲ್ಲದೆ ಸಮೀಪದ ಹಂಡನಹಳ್ಳಿ ಗ್ರಾಮದ ವಿನಾಯಕ ದೇವಾಲಯದ ಬೀಗ ಒಡೆದ ಕಳ್ಳರು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ.
ಹಲಗೂರಿನ ಕೆರೆ ಬಳಿ ಇರುವ ಪಟ್ಟಲದಮ್ಮ ದೇವಾಲಯದ ಮುಖ್ಯದ್ವಾರದ ಬಾಗಿಲ ಬೀಗ ಒಡೆದ ಕಳ್ಳರು ಗರ್ಭಗುಡಿಯ ಬಾಗಿಲು ಮುರಿಯಲು ವಿಫಲರಾಗಿದ್ದಾರೆ. ರಾತ್ರಿ 12.30ರಲ್ಲಿ ಗಸ್ತು ಬಂದ ಪೊಲೀಸರು ದೇವಾಲಯದ ಬೀಗ ಒಡೆದಿರುವುದನ್ನು ಗಮನಿಸಿದ್ದಾರೆ. ವಿಷಯ ತಿಳಿದ ಪಿಎಸ್‌ಐ ಲೋಕೇಶ್ ದೇವಾಲಯದ ಅರ್ಚಕರನ್ನು ಕರೆಸಿ ತಪಾಸಣೆ ನಡೆಸಿದಾಗ ದೇವಾಲಯದ ಗರ್ಭಗುಡಿಯಲ್ಲಿ ಯಾವುದೇ ಕಳ್ಳತನ ಆಗಿಲ್ಲ ಎಂದು ತಿಳಿದು ಬಂದಿದೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.